ವೀರಾಜಪೇಟೆ, ಆ. 7: ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯ ಶತಮಾನಗಳ ಹಿಂದಿನ ಸ್ಮಾರಕವಾಗಿದ್ದು, ಇದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಆಡಳಿತ ಬದ್ಧವಾಗಿದೆ ಎಂದು ಸಂತ ಅನ್ನಮ್ಮ ದೇವಾಲಯ ಹಾಗೂ ವಿದ್ಯಾಸಂಸ್ಥೆಯ ಪ್ರಧಾನ ಆಡಳಿತಗಾರ ರೆ.ಫಾ. ಮದಲೈಮುತ್ತು ಹೇಳಿದರು.

ಸುಮಾರು 225 ವರ್ಷಗಳ ಪುರಾತನ ಸಂತ ಅನ್ನಮ್ಮ ದೇವಾಲಯದ (ಸೈಂಟ್ ಏನ್ಸ್ ಚರ್ಚ್) ಸ್ಮರಣಾರ್ಥ ಅಂಚೆ ಲಕೋಟೆಯನ್ನು ಮಡಿಕೇರಿಯಸಭೆಯನ್ನುದ್ದೇಶಿಸಿ ಮಾತನಾಡಿದ ಮದಲೈಮುತ್ತು, ಸಂತ ಅನ್ನಮ್ಮ ದೇವಾಲಯದ ಚಿತ್ರ ಸ್ಮಾರಕವಾಗಿ ಅಂಚೆ ಲಕೋಟೆಯಲ್ಲಿ ಮುದ್ರಿತಗೊಂಡಿರುವದರಿಂದ ದೇವಾಲಯ ಸ್ಮಾರಕವಾಗಿ ಉಳಿಯಲು ಅದಕ್ಕೆ ಪ್ರಚಾರದ ರಕ್ಷಣೆ ದೊರಕಿದಂತಾಗಿದೆ ಎಂದರು.

ಅಂಚೆ ಕಚೇರಿ ಅಧೀಕ್ಷಕ ನಾಗೇಂದ್ರ ಮಾತನಾಡಿ, ಇಂದು ಬಿಡುಗಡೆಗೊಂಡ ಸ್ಮಾರಕ ಅಂಚೆ ಲಕೋಟೆ ನಾಳೆಯಿಂದ ರಾಷ್ಟ್ರಾದ್ಯಂತ ಅಂಚೆ ಕಚೇರಿಯಲ್ಲಿ ದೊರೆಯಲಿದೆ. ಅಂಚೆ ಇಲಾಖೆ “ನಮ್ಮ ಚೀಟಿ” (ಮೈ ಸ್ಟಾಂಪ್)ಗೂ ಅವಕಾಶ ನೀಡಿದೆ ಎಂದು ಹೇಳಿದರು.

ವೀರಾಜಪೇಟೆಯ ತಾಲೂಕು ಪ್ರಧಾನ ಅಂಚೆ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ರೋಷನ್ ಬಾಬು, ಐಸಾಕ್ ರತ್ನಾಕರ್, ಸ್ತ್ರೀಕನ್ಯೆಯರುಗಳಾದ ಜಾನೆಟ್ ಪಿಂಟೊ, ಅನ್ನಮೇರಿ, ಡಾ. ಎಸ್. ನರಸಿಂಹನ್, ಡಾ. ದುರ್ಗಾಪ್ರಸಾದ್, ಉಪ ಅಂಚೆ ಅಧಿಕಾರಿ ಎನ್.ಪಿ. ಕೃಷ್ಣಪ್ಪ ಹಾಗೂ ಸಿಬ್ಬಂದಿಗಳು ಹಾಜರಿದ್ದರು.