ಮಡಿಕೇರಿ, ಆ.7 : ಬೆಂಗಳೂರಿನ ರೈಸಿಂಗ್ ಸನ್ ಮೂವೀಸ್ ವತಿಯಿಂದ ಕೊಡಗಿನ ಕೊಡವ ಕುಟುಂಬದ ಸಂಬಂಧಗಳನ್ನು ನವಿರಾಗಿ ನಿರೂಪಿಸುವ ಕೊಡವ ಭಾಷಾ ಚಲನ ಚಿತ್ರವೊಂದನ್ನು ನಿರ್ಮಿಸಲು ಉದ್ದೇಶಿಸ ಲಾಗಿದೆಯೆಂದು ನಿರ್ಮಾಪಕ ಆರ್.ಗಂಗಾಧರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಅಕ್ಟೋಬರ್‍ನಲ್ಲಿ ಚಿತ್ರೀಕರಣ ಆರಂಭಿಸಿ ಮುಂದಿನ ಸಾಲಿನ ಮಕರಸಂಕ್ರಾಂತಿಯ ಸಂದರ್ಭ ಚಲನಚಿತ್ರವನ್ನು ಬಿಡುಗಡೆ ಗೊಳಿಸಲಾಗುವದು ಎಂದರು. ಕೊಡಗಿನ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ಆಸಕ್ತರು ಗಯಾಜ್ ಮೊಬೈಲ್ ಸಂಖ್ಯೆ 9448325776, ರಾಕೇಶ್ 9448217377 ರನ್ನು ಸಂಪರ್ಕಿಸಬಹುದಾಗಿದೆ.

ಚಿತ್ರಕಥೆ ಮತ್ತು ಸಹನಿರ್ದೇಶನವನ್ನು ಕುಶಾಲನಗರದ ಗಯಾಜ್ ಅವರು ನಿರ್ವಹಿಸಲಿದ್ದು, ಕೊಡವ ಭಾಷಾ ಸಂಭಾಷಣೆಯನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಬರೆಯಲಿದ್ದಾರೆ. ನಿರ್ದೇಶನವನ್ನು ಸಾಲೋಮಾನ್ ಕೆ.ಜಾರ್ಜ್, ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಸಂಗೀತ ರಾಜ್ ಭಾಸ್ಕರ್, ಕಾರ್ಯಕಾರಿ ನಿರ್ಮಾಪಕರಾಗಿ ರಾಕೇಶ್ ಬಿ.ಎಸ್. ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಚಲನಚಿತ್ರದ ಚಿತ್ರೀಕರಣವನ್ನು ಪ್ರಮುಖವಾಗಿ ಕೊಡಗಿನ ಹಸಿರ ಪರಿಸರದೊಂದಿಗೆ ಕಕ್ಕಬ್ಬೆ, ಕುಶಾಲನಗರ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದ ಅವರು, ಬಡ ಕುಟುಂಬದಲ್ಲಿ ಜೀವನ ಸಾಗಿಸುತ್ತಿರುವ ಕೊಡವ ಕಟುಂಬದೊಳಗಿನÀ ಮಧುರ ಬಾಂಧವ್ಯವನ್ನು ನಿರೂಪಿಸುವ ಕಥಾ ಚಿತ್ರವನ್ನು ಪರದೆಯ ಮೇಲೆ ತರುವ ಪ್ರಯತ್ನ ಮಾಡಲಾಗುತ್ತದೆ. ಭಾಷೆಯ ಬೆಳವಣಿಗೆ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಗಮನದಲ್ಲಿರಿಸಿಕೊಂಡು ಅಂದಾಜು 35 ಲಕ್ಷ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಾಲೋಮನ್ ಕೆ. ಜಾರ್ಜ್, ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್, ಸಹ ನಿರ್ದೇಶಕ ಗಯಾಜ್ ಕುಶಾಲನಗರ, ಕಾರ್ಯಕಾರಿ ನಿರ್ಮಾಪಕ ಬಿ.ಎಸ್.ರಾಕೇಶ್ ಉಪಸ್ಥಿತರಿದ್ದರು.