ಕೂಡಿಗೆ, ಆ. 7: ಪ್ರಧಾನಮಂತ್ರಿಯವರ ಕನಸಿನ ಕೂಸಾಗಿರುವ ದತ್ತು ಗ್ರಾಮ ಯೋಜನೆಯಡಿಯಲ್ಲಿ ಆಯಾ ವ್ಯಾಪ್ತಿಯ ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಗ್ರಾಮಗಳನ್ನು ದತ್ತು ಪಡೆದುಕೊಂಡು ಆ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಚಿಂತನೆಯನ್ನು ದತ್ತು ಗ್ರಾಮ ಯೋಜನೆ ಹೊಂದಿದೆ.
ಅದರಂತೆ ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ತೆಗೆದುಕೊಳ್ಳಲಾಗುವದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಕೆಲ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಕೊಡಗು ಜಿಲ್ಲೆಯಲ್ಲಿಯೂ ದತ್ತು ಗ್ರಾಮವನ್ನು ದತ್ತು ಪಡೆದುಕೊಳ್ಳುವದರಿಂದ ಸಂಸದರ ಹೆಚ್ಚು ಅನುದಾನ ಈ ಗ್ರಾಮಕ್ಕೆ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಮೂಲಕ ಬರುವ ಅನುದಾನದಲ್ಲಿ ಅಭಿವೃದ್ಧಿಯ ಯೋಜನೆಗಳ ಮೂಲಕ ಗ್ರಾಮವು ಮಾದರಿ ಗ್ರಾಮವಾಗಲು ಸಾಧ್ಯವಾಗುತ್ತದೆ ಎಂಬ ಹೇಳಿಕೆಗಳು ಪ್ರಕಟಗೊಂಡಿದ್ದವು.
ಆದರೆ, ಇದುವರೆಗೂ ಯಾವದೇ ರೀತಿಯ ದತ್ತು ಗ್ರಾಮದ ಬಗ್ಗೆ ಸಭೆಗಳು ಜಿಲ್ಲಾ ಮಟ್ಟದಲ್ಲಿ ನಡೆದಿಲ್ಲ. ದತ್ತು ಗ್ರಾಮದ ಹೆಸರು ಕೂಡಿಗೆ ಗ್ರಾಮ ಪಂಚಾಯಿತಿಯಾಗಿದ್ದು, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಭಿವೃದ್ಧಿ ಕೆಲಸಗಳು ಮತ್ತು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 4 ಹಾಡಿಗಳು ಸೇರಿದಂತೆ ಈಗಾಗಲೇ ದಿಡ್ಡಳ್ಳಿ ಆದಿವಾಸಿಗಳು ಬ್ಯಾಡಗೊಟ್ಟದಲ್ಲಿ ವಾಸವಿರುವದರಿಂದ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಹಾಗೂ ವಿವಿಧ ಇಲಾಖೆಯ ಯೋಜನೆಗಳು ಈ ಗ್ರಾಮದಲ್ಲಿ ಅನುಷ್ಠಾನಗೊಳ್ಳುವದರಿಂದ ಗ್ರಾಮದ ಪ್ರಗತಿ ಸಾಧ್ಯವಾಗುತ್ತದೆ ಎಂಬ ಹರ್ಷದಲ್ಲಿ ಇದ್ದರು. ಇದೀಗ ಗ್ರಾಮ ಮಟ್ಟದಲ್ಲಾಗಲೀ ಅಥವಾ ತಾಲೂಕು ಮಟ್ಟದಲ್ಲಿಯಾಗಲೀ ಈ ದತ್ತು ಗ್ರಾಮದ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಕಳೆದ ವಾರ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಸಂಸದ ಪ್ರತಾಪ್ ಸಿಂಹ ಅವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲು ಒಕ್ಕೊರಲಿನ ತೀರ್ಮಾನ ಕೈಗೊಂಡಿದ್ದಾರೆ.