ಕುಶಾಲನಗರ, ಆ. 7: 2013 ರಲ್ಲಿ ಯಾವದೇ ಪಕ್ಷಗಳಿಗೆ ಬಹುಮತ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ 2018 ರಲ್ಲಿ ಮತ್ತೆ ಚುನಾವಣೆ ಎದುರಿಸುತ್ತಿದೆ. 13 ವಾರ್ಡ್‍ಗಳಾಗಿ ವಿಭಜನೆಗೊಂಡಿದ್ದ ಕುಶಾಲನಗರ ಪಟ್ಟಣದ ವ್ಯಾಪ್ತಿ ಇದೀಗ 16 ವಾರ್ಡ್‍ಗಳಿಗೆ ವಿಸ್ತಾರಗೊಂಡಿದೆ. 4 ಬ್ಲಾಕ್‍ಗಳ 35 ಕ್ಕೂ ಅಧಿಕ ಬಡಾವಣೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಯಾವದೇ ವಿಶೇಷ ಅಭಿವೃದ್ಧಿ ಯೋಜನೆಗಳು ನಡೆಯದಿದ್ದರೂ ನಿಯಮಾನುಸಾರ ನಡೆಯಬೇಕಿದ್ದ ಕಾಮಗಾರಿ ಮಾತ್ರ ನಡೆದಿರುವದು ಸ್ಥಳೀಯ ನಾಗರಿಕರಿಗೆ ಸಮಾಧಾನದ ಸಂಗತಿಯಾಗಿದೆ.

ನೆನೆಗುದಿಗೆ ಬಿದ್ದಿದ್ದ ಗುಂಡೂರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆ ಹೊರತುಪಡಿಸಿದರೆ ಈ ಬಡಾವಣೆಯಲ್ಲಿ ಯಾವದೇ ಹೆಚ್ಚುವರಿ ಕಾಮಗಾರಿ ನಡೆದಿಲ್ಲ. ಬೈಚನಹಳ್ಳಿ ಗ್ರಾಮ ಇನ್ನೂ ಪಟ್ಟಣದ ಹಳೆಯ ಪಳೆಯುಳಿಕೆಯಂತೆ ಭಾಸವಾಗುತ್ತಿದೆ. ಕಾವೇರಿ ಬಡಾವಣೆ, ಇಂದಿರಾ ಬಡಾವಣೆ ಕೂಡ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ದಂಡಿನಪೇಟೆ, ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆ ವ್ಯಾಪ್ತಿಯಿಂದ ಶಾಂತಿ ಮಾರ್ಗದ ತನಕ ಈ 5 ವರ್ಷ ಅವಧಿಯಲ್ಲಿ ಪಂಚಾಯಿತಿ ನಿಧಿಯ ಮೂಲಕ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳು ಮಾತ್ರ ನಡೆದಿವೆ.

ಮುಖ್ಯವಾಗಿ ನಡೆಯಬೇಕಾಗಿದ್ದ ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಇನ್ನೂ ಪಂಚವಾರ್ಷಿಕ ಯೋಜನೆಯಂತೆ ನೆನೆಗುದಿಗೆ ಬಿದ್ದಿರುವದು ಕಾಣಬಹುದು. ಬಾಪೂಜಿ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ ಸೇರಿದಂತೆ ಕಾಳಮ್ಮ ಕಾಲನಿ, ಆದರ್ಶ ದ್ರಾವಿಡ ಕಾಲನಿ, ನೇತಾಜಿ ಬಡಾವಣೆ ಮತ್ತಿತರ ಬಡಾವಣೆಗಳ ವ್ಯಾಪ್ತಿಯಲ್ಲಿ ಕೂಡ ಈ 5 ವರ್ಷದ ಅವಧಿಯಲ್ಲಿ ಯಾವದೇ ವಿಶೇಷ ಯೋಜನೆಗಳು ಕಂಡುಬರುತ್ತಿಲ್ಲ. ಡಾ. ಎಸ್. ರಾಧಾಕೃಷ್ಣ ಬಡಾವಣೆ, ಡಾ. ಶಿವರಾಮ ಕಾರಂತ ಬಡಾವಣೆ, ಗೌಡ ಸಮಾಜ ವ್ಯಾಪ್ತಿ ಹಾಗೂ ನೆಹರೂ ಬಡಾವಣೆ, ಹೆಚ್‍ಆರ್‍ಪಿ ಕಾಲನಿಗಳ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ನಿವಾಸಿಗಳು ದಿನನಿತ್ಯ ಶಪಿಸುವದಂತೂ ನಿಜ. ಈ ಎಲ್ಲಾ ಅವ್ಯವಸ್ಥೆ ನಡುವೆ ಕುಶಾಲನಗರಕ್ಕೆ ಬಂದ ಬೃಹತ್ ಯೋಜನೆಯೊಂದು ಸ್ಥಳೀಯ ಆಡಳಿತದ ಸಂಪೂರ್ಣ ನಿರ್ಲಕ್ಷ್ಯದಿಂದ ನೆನೆಗುದಿಗೆ ಬೀಳುವದರೊಂದಿಗೆ ಯೋಜನೆಯ ಉದ್ದೇಶ ಸಂಪೂರ್ಣ ನೀರು ಪಾಲಾಗಿದೆ.

ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ಉದ್ದೇಶ ಹೊತ್ತು ಸರಕಾರ ನೀಡಿದ ಅಂದಾಜು ರೂ. 50 ಕೋಟಿಯ ಒಳಚರಂಡಿ ಕಾಮಗಾರಿ ಇಡೀ ಊರಿನ ರಸ್ತೆಯನ್ನು ನುಂಗಿಹಾಕಿದ್ದು ಇನ್ನೊಂದೆಡೆ ಕಾವೇರಿ ನದಿಯನ್ನು ನೇರವಾಗಿ ಕಲುಷಿತಗೊಳಿಸುತ್ತಿದೆ. ಕಾಮಗಾರಿ ಪೂರ್ಣಗೊಳಿಸುವಲ್ಲಿ ಇಡೀ ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳು ಮೌನ ತಾಳಿರುವದು ಸಂಶಯಕ್ಕೆ ಎಡೆಮಾಡಿದೆ. ವಾಣಿಜ್ಯ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಕಳೆದ 6 ದಶಕಗಳ ಕಾಲ ಗ್ರಾ.ಪಂ., ಮಂಡಲ ಪಂಚಾಯಿತಿ, ಪಟ್ಟಣ ಪಂಚಾಯಿತಿ ಆಡಳಿತ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಕಟ್ಟಡವೊಂದನ್ನು ಕೆಡವಿ ಮಾಸಿಕ ಅರ್ಧ ಲಕ್ಷ ರೂಪಾಯಿಗಳ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿ ಸರಕಾರದ ಆದಾಯಕ್ಕೆ ಕುತ್ತು ತಂದಿರುವ ಹಿಂದಿನ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಸ್ಥಳೀಯರು ಟೀಕೆ ಮಾಡುತ್ತಿರುವದು ಕಾಣಬಹುದು.

ಇದರ ನಡುವೆ ಕುಶಾಲನಗರ ಸುತ್ತ ಜೀವನದಿ ಕಾವೇರಿ ಹರಿಯುತ್ತಿದ್ದರೂ ಶುದ್ಧ ಕುಡಿಯುವ ನೀರು ನೀಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ. 2011 ರ ಹಿಂದಿನ ಯೋಜನೆಯನ್ವಯ ಕುಶಾಲನಗರಕ್ಕೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡುವದು ಮುಂದುವರೆದಿದೆ. ಯೋಜನೆಗಳು ಕೇವಲ ದಾಖಲೆಗಳಲ್ಲಿ ಕಾಣುತ್ತಿವೆಯೇ ಹೊರತು ಪಟ್ಟಣದಲ್ಲಿ ಲೋಕಾರ್ಪಣೆಗೊಂಡಿರುವದು ಬಹುತೇಕ ಕಡಿಮೆ ಎನ್ನಬಹುದು. ಹಗರಣಗಳ ಸರಮಾಲೆಯೇ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯವಸ್ಥೆಯಲ್ಲಿ ನಡೆದಿದ್ದು, ಇನ್ನೂ ಹಸಿರಾಗಿದೆ. ಉದ್ಯಾನವನ, ರಸ್ತೆ, ಸರಕಾರಿ ಜಾಗಗಳ ಒತ್ತುವರಿ, ನಿಯಮ ಬಾಹಿರ ಕಟ್ಟಡ ನಿರ್ಮಾಣ ಇಂತಹ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿರುವದು ಕುಶಾಲನಗರ ಪಟ್ಟಣದಲ್ಲಿ ಕಾಣಬಹುದು.

ಭೂ ದಂಧೆಕೋರರಿಗೆ ಸರಕಾರಿ ಜಮೀನಿನ ಅಕ್ರಮ ಪರಭಾರೆ, ಅಭಿವೃದ್ಧಿ ಯೋಜನೆಗಳಿಗೆ ಸ್ಥಳೀಯರಿಂದಲೇ ಅಡ್ಡಿ, ಪಂಚಾಯಿತಿ ಕಚೇರಿಯಲ್ಲಿ ಸಮರ್ಪಕ ಮೂಲ ದಾಖಲೆಗಳ ಅಲಭ್ಯತೆ ಈ ಮೂಲಕ ಕುಶಾಲನಗರದ 10 ಎಕರೆಗೂ ಅಧಿಕ ಜಾಗ ಖಾಸಗಿಯವರ ಪಾಲಾಗಿರುವದು ದಾಖಲೆಗಳಲ್ಲಿ ಕಾಣಬಹುದು.

ಇದರಿಂದ ಕುಶಾಲನಗರದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಯಾವದೇ ಜಾಗ ದೊರಕದೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು. ಕುಶಾಲನಗರದಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸುವದು, ಬೃಹತ್ ವಾಣಿಜ್ಯ ಮಳಿಗೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಪಂಚಾಯಿತಿ ಮುಂದಾಗಿದ್ದು, ಇದಕ್ಕೆ ಕೆಲವರ ಅಸಹಕಾರ ಯೋಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರು ಹೇಳಿದ್ದಾರೆ.

ಪಂಚಾಯಿತಿ ಆಡಳಿತ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಿರುವದೇ ಎಲ್ಲಾ ವೈಫಲ್ಯಕ್ಕೆ ಮತ್ತೊಂದು ಕಾರಣವಾಗಿದೆ. ಪಟ್ಟಣ ಪಂಚಾಯಿತಿಗೆ ದೊರಕಬೇಕಾದ ಆದಾಯ ಕೂಡ ಸೋರುತ್ತಿದ್ದು, ಕಟ್ಟಡ ತೆರಿಗೆ, ವ್ಯಾಪಾರ ಮಳಿಗೆ ಪರವಾನಗಿ ತೆರಿಗೆಗಳು ಖಜಾನೆಗೆ ತುಂಬುವಲ್ಲಿ ಹಿಂದೇಟು ಹಾಕುತ್ತಿರುವದೇ ಕುಶಾಲನಗರದ ಅಭಿವೃದ್ಧಿಗೆ ಕಂಟಕವಾಗಿದೆ.

ಪಟ್ಟಣದಲ್ಲಿ ಅಕ್ರಮವಾಗಿ, ನಿಯಮ ಬಾಹಿರವಾಗಿ ಬಡಾವಣೆಗಳು ಕೂಡ ತಲೆ ಎತ್ತುತ್ತಿದ್ದು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧಿಕಾರಿಗಳ ಭ್ರಷ್ಟಾಚಾರವೇ ಪ್ರಸಕ್ತ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎನ್ನುವದು ಜಗಜ್ಜಾಹಿರಾಗಿರುವ ವಿಷಯವಾಗಿದೆ. ಕುಶಾಲನಗರ ಸೇರಿದಂತೆ ಸುತ್ತಮುತ್ತ 5 ಕ್ಕಿಂತಲೂ ಹೆಚ್ಚು ಬಡಾವಣೆಗಳ ಪರವಾನಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿರುವದು ಕೂಡ ಇದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಇದೀಗ ಜಿಲ್ಲಾಧಿಕಾರಿಗಳು ಕುಶಾಲನಗರಕ್ಕೆ ಖಾಯಂ ಸದಸ್ಯ ಕಾರ್ಯದರ್ಶಿಯೊಬ್ಬರನ್ನು ನೇಮಿಸಲು ಕ್ರಮ ಕೈಗೊಂಡಿದ್ದಾರೆ. ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ಬಡಾವಣೆಗಳ ಎಲ್ಲಾ ಅಕ್ರಮಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಕುಡಾ ಹಿರಿಯ ಅಧಿಕಾರಿಯೊಬ್ಬರು ‘ಶಕ್ತಿ’ಗೆ ತಿಳಿಸಿದ್ದಾರೆ. ಮೂರೂ ಪಕ್ಷಗಳ ನಾಯಕರು ಕುಶಾಲನಗರದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವಲ್ಲಿ ಯುದ್ದೋಪಾದಿಯಾಗಿ ಸನ್ನದ್ಧರಾಗಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.

ವಾರ್ಡ್ ವಿಸ್ತರಣೆ

ಇದೀಗ 2018 ರ ಚುನಾವಣೆ ಮತ್ತೆ ಬಂದಿದ್ದು, 13 ವಾರ್ಡ್‍ಗಳ ಬದಲಾಗಿ 16 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 13096 ಮತದಾರರು ಈ ಬಾರಿ ಜನಪ್ರತಿನಿಧಿಗಳ ಆಯ್ಕೆ ಮಾಡಲಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮೀಪದ ಗುಡ್ಡೆಹೊಸೂರು ಗ್ರಾ.ಪಂ.ನ ಗಂಧದಕೋಟೆ ಮತ್ತು ನೂತನ ಹೌಸಿಂಗ್ ಬೋರ್ಡ್ ಪ್ರದೇಶದ 300 ಕ್ಕೂ ಅಧಿಕ ಜನಸಂಖ್ಯೆ, ಮುಳ್ಳುಸೋಗೆ ವ್ಯಾಪ್ತಿಯ ಕರಿಯಪ್ಪ ಬಡಾವಣೆ, ಜನತಾ ಕಾಲನಿ, ಓಂಕಾರ್ ಬಡಾವಣೆ ಸೇರಿದಂತೆ ಅಲ್ಲಿನ ಅಂದಾಜು 600 ಜನಸಂಖ್ಯೆಯನ್ನು ಸೇರಿಸಿ 3 ವಾರ್ಡ್‍ಗಳು ಈ ಬಾರಿ ಹೆಚ್ಚುವರಿಯಾಗಿದೆ.

ಜನಸಂಖ್ಯೆ ಮಾಹಿತಿ: 1ನೇ ವಾರ್ಡ್-598, 2ನೇ ವಾರ್ಡ್ 542, 3ನೇ ವಾರ್ಡ್ 1073, 4ನೇ ವಾರ್ಡ್ 781, 5 ರಲ್ಲಿ 640, 6 ರಲ್ಲಿ 518, 7 ರಲ್ಲಿ 360, 8 ರಲ್ಲಿ 1107, 9 ರಲ್ಲಿ 753, 10 ರಲ್ಲಿ 956, 11 ರಲ್ಲಿ 1338, 12 ರಲ್ಲಿ 708, 13 ರಲ್ಲಿ 804, 14 ರಲ್ಲಿ 970, 15 ರಲ್ಲಿ 767 ಮತ್ತು 16 ರಲ್ಲಿ 1181 ಮತದಾರರು ಇದ್ದಾರೆ.

ಒಟ್ಟು 13 ವಾರ್ಡ್‍ಗಳಲ್ಲಿ ಹಿಂದಿನ ಅವಧಿಯಲ್ಲಿ 6 ಸ್ಥಾನ ಬಿಜೆಪಿಗೆ, 4 ಸ್ಥಾನ ಜೆಡಿಎಸ್, ಕಾಂಗ್ರೆಸ್‍ಗೆ 3 ಸ್ಥಾನ ದಕ್ಕಿತ್ತು. ಈ ಹಿನ್ನೆಲೆ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯಲು ಮತದಾರ ಅತಂತ್ರ ಸ್ಥಿತಿ ಉಂಟುಮಾಡಿರುವದನ್ನು ಸ್ಮರಿಸಬಹುದು.

- ಚಂದ್ರಮೋಹನ್