ಗೋಣಿಕೊಪ್ಪ ವರದಿ, ಆ. 7: ಟಿ. ಶೆಟ್ಟಿಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ 7 ದಿನಗಳ ಕಾಲ ಆಯೋಜಿಸಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರಕ್ಕೆ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ. ಎಸ್. ಯಶೋಧ ಚಾಲನೆ ನೀಡಿದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಎನ್‍ಎಸ್‍ಎಸ್ ಶಿಬಿರವು ಭವಿಷ್ಯದಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳುವ ಸಂದರ್ಭ ಮತ್ತಷ್ಟು ಸೇವೆ ನೀಡಲು ಅವಕಾಶ ನೀಡಿದಂತಾಗುತ್ತದೆ. ಸೇವಾಭಾವನೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳಲು ಶಿಬಿರ ಹೆಚ್ಚು ಸಹಕಾರಿ ಎಂದರು.

ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಮಾತನಾಡಿ, ಸ್ವಚ್ಛತೆಗೆ ಹೆಚ್ಚು ಆಸಕ್ತಿ ಮೂಡಿಸುವ ಶಿಬಿರಗಳಿಂದ ಗ್ರಾಮವು ಕೂಡ ಅಭಿವೃದ್ಧಿ ಸಾಧಿಸಲಿವೆ ಎಂದರು.

ಮೂಂದ್‍ನಾಡ್ ಕೊಡವ ಸಮಾಜ ಅಧ್ಯಕ್ಷ ಕೋಟ್ರಮಾಡ ಎಂ. ಅರುಣ್ ಮಾತನಾಡಿ, ಬದುಕಿನಲ್ಲಿ ಶಿಸ್ತು ಹೆಚ್ಚು ಮಹತ್ವವನ್ನು ಹೊಂದಿದೆ. ಶಿಬಿರದಿಂದ ಶಿಸ್ತು ಪಡೆದುಕೊಳ್ಳಬಹುದು ಎಂದರು.

ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಶಿಬಿರದ ಸಂದರ್ಭ ಗ್ರಾಮದ ಮಾಹಿತಿ ಕಲೆ ಹಾಕುವ ಮೂಲಕ ಗ್ರಾಮಸ್ಥರೊಂದಿಗೆ ಭಾವನಾತ್ಮಕವಾಗಿ ಬೆರೆಯಲು ಸಹಕಾರಿಯಾಗುತ್ತದೆ. ಗ್ರಾಮದ ಅರಿವು ದೊರೆತಂತಾಗುತ್ತದೆ ಎಂದರು.

ಈ ಸಂದರ್ಭ ಟಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯರುಗಳಾದ ಚೊಟ್ಟೆಯಂಡಮಾಡ ಕೆ. ಉದಯ್, ಟಿ.ಟಿ. ಮೀನಾ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಜಮಾಡ ಪಿ. ಕುಶಾಲಪ್ಪ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಾದ ಮುಕ್ಕಾಟೀರ ಕೆ. ಸುಬ್ರಮಣಿ, ಕೆ.ಎ. ಈಶ್ವರ, ಬಿ. ಮಧುಸೂಧನ್ ರೆಡ್ಡಿ ಪಾಲ್ಗೊಂಡಿದ್ದರು. ಐಸಿರಿ ಎನ್‍ಎಸ್ ಎಸ್ ವರದಿ ವಾಚಿಸಿದರು. ಪುನಿತ್ ಸ್ವಾಗತಿಸಿದರು. ನಾರಾಯಣ್ ವಂದಿಸಿದರು. ನಯನ ನಿರೂಪಿಸಿದರು.