ವೀರಾಜಪೇಟೆ, ಆ.6: ತಾ. 29ರಂದು ನಡೆಯಲಿರುವ ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ 18 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ತಾಲೂಕು ಮುಖಂಡರುಗಳು ಇಲ್ಲಿನ ಬೋರೇಗೌಡ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸಭೆ ನಡೆಸಿದರು. ಜೆ.ಡಿ.ಎಸ್ ಸೇರಿದಂತೆ ಇತರ ಯಾವದೇ ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲದೆ ಎಲ್ಲಾ ಹದಿನೆಂಟು ಕ್ಷೇತ್ರಗಳಿಗೂ ಸ್ಪರ್ಧಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ಸಂದರ್ಭ ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ ಸುಮಾರು 65ಕ್ಕೂ ಅಧಿಕ ಮಂದಿ ಟಿಕೆಟ್ ಅಕಾಂಕ್ಷಿಗಳು ಪಕ್ಷದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಇಂದು ಸಂಜೆಯವರೆಗೂ ಸ್ಪರ್ಧಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳ ಮಾನದಂಡವನ್ನು ಪರಿಶೀಲಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಕೊಡಲು ಸಮಿತಿ ತೀರ್ಮಾನಿಸಿದೆ. ಚುನಾವಣೆಗಾಗಿ ವಿಭಾಗವಾರು ಉಪ ಸಮಿತಿಗಳನ್ನು ಹಾಗೂ ಚುನಾವಣಾ ಪ್ರಚಾರ ಸಮಿತಿಯನ್ನು ರಚಿಸಲಾಗುವದು. ತಾ. 10ರೊಳಗೆ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ತಾ. 15ರೊಳಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿ ಕೊಡಲಾಗುವದು ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ,ಪಕ್ಷದ ಜಿಲ್ಲಾ ಮುಖಂಡರುಗಳಾದ ಟಿ.ಪಿ.ರಮೇಶ್, ಸಿ.ಎಸ್.ಅರುಣ್ ಮಾಚಯ್ಯ, ಡಿ.ಸಿ.ಧ್ರುವ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ, ಆರ್.ಎಂ.ಸಿ ಸದಸ್ಯ ಎಂ.ಕೆ.ಬೋಪಣ್ಣ. ಮಾಳೇಟಿರ ಬೆಲ್ಲು ಬೋಪಯ್ಯ, ಜಿ.ಜಿ.ಮೋಹನ್, ಶಶಿಧರ್, ಇದ್ರೀಶ್ ಮತ್ತಿತರ ಕಾರ್ಯಕರ್ತರುಗಳು ಹಾಜರಿದ್ದರು. ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ತಾ: 7ರಂದು (ಇಂದು) ವೀರಾಜಪೇಟೆಯಲ್ಲಿ ನಡೆಯುವದಾಗಿ ಶಿವು ಮಾದಪ್ಪ ತಿಳಿಸಿದರು.