ಮಡಿಕೇರಿ, ಆ. 6 : ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು ಎಂದು ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಡಿ.ದೇವರಾಜು ಅರಸು ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಇವರ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ತಾರತಮ್ಯ ಭಾವನೆ ಇರುವದಿಲ್ಲ. ಮುಂದೆ ಬೆಳೆದ ಹಾಗೇ ಸಮಾಜದ ವ್ಯವಸ್ಥೆ ಅವರಲ್ಲಿ ಈ ಭಾವನೆ ಬೆಳೆಯಲು ಅವಕಾಶ ನೀಡುತ್ತದೆ. ಈ ರೀತಿಯ ವ್ಯವಸ್ಥೆಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಬೇರೆಯವರ ಬಗ್ಗೆ ಬೊಟ್ಟು ಮಾಡಿ ತೋರಿಸುವ ಮೊದಲು ನಾವು ಸರಿಯಾಗಿರಬೇಕು. ನಾವು ಸರಿಯಾಗಿದ್ದರೆ ಸಮಾಜದ ವ್ಯವಸ್ಥೆಯು ಸರಿಯಾಗಿರುತ್ತದೆ. ಪ್ರತಿಯೊಬ್ಬರು ಮೊದಲು ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಬೇರೆಯವರಿಗೆ ತೋರಿಕೆಗಾಗಿ ದೇಶ ಭಕ್ತಿಯನ್ನು ವ್ಯಕ್ತಪಡಿಸಬಾರದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯ ಪ್ರಜ್ಞೆ, ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು ಹಾಗೂ ಜಿಲ್ಲಾ ಗೈಡ್ ಆಯುಕ್ತೆ ಸಾವಿತ್ರಿ ಬಿ.ಬಿ ಅವರು ಮಾತನಾಡಿ ನಾವು ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಯಾರನ್ನೂ ಅಸೂಯೆ ಭಾವನೆಯಿಂದ ಕಾಣಬಾರದು. ದೇಶಾಭಿಮಾನ ಎಂಬದು ಪ್ರತಿಯೊಬ್ಬರಲ್ಲೂ ಇರಬೇಕು. ವಿದ್ಯಾರ್ಥಿಗಳು ಈಗಿನಿಂದಲೇ ಕ್ರೀಡಾ ಸ್ಪೂರ್ತಿಯನ್ನು ಬೆಳಸಿಕೊಳ್ಳಬೇಕು. ಸೋಲು ಗೆಲುವು ಎಂಬದು ಜೀವನದಲ್ಲಿ ಇರುತ್ತದೆ. ಸೋತಾಗ ಸೋತೆನೆಂದು ಬೇಸರಗೊಳ್ಳದೇ ಸೋಲನ್ನು ಗೆಲುವಿಗೆ ಪ್ರೇರಣೆ ಎಂದು ವಿದ್ಯಾರ್ಥಿಗಳು ಭಾವಿಸಿ ಪ್ರಯತ್ನಿಸುತ್ತಿರಬೇಕು ಎಂದು ಹೇಳಿದರು.

ತೀರ್ಪುಗಾರ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಯುವ ಜನತೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಶಭಕ್ತಿ ಕಡಿಮೆಯಾಗಿದೆ. ಯುವ ಜನತೆ ದೇಶಕ್ಕಾಗಿ ಹೋರಾಡಿದ ಮಹನೀಯರ ಜೀವನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಎ.ಆರ್.ಕುಟ್ಟಪ್ಪ ಅವರು ವಿತರಿಸಿದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ, ಆಯುಕ್ತೆ ಜಿಮ್ಮಿ ಸಿಕ್ವೇರಾ, ತೀರ್ಪುಗಾರರಾದ ಜಯಲಕ್ಷ್ಮೀ ರಮೇಶ್, ಎ.ಡಿ. ಮೀನಾಕ್ಷಿ ಇತರರು ಇದ್ದರು.