ಶ್ರೀಮಂಗಲ, ಆ. 6 : ದಕ್ಷಿಣ ಕೊಡಗಿನ ಕಾನೂರಿನಲ್ಲಿ ಆಯೋಜನೆ ಗೊಂಡಿದ್ದ ‘ಬೇಲ್ ನಮ್ಮೆ’ಯಲ್ಲಿ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಕೆಸರು ಗದ್ದೆಯ ಕ್ರೀಡಾಕೂಟದ ಸವಿಯನ್ನು ಸವಿದರು. ಸಂಪೂರ್ಣ ಕೆಸರು ಮಯವಾದರೂ ತಣಿಯದ ಉತ್ಸಾಹದಿಂದ ಭಾಗವಹಿಸಿ ಸ್ಪರ್ಧೆ ಯಲ್ಲಿ ಗಮನ ಸೆಳೆದರು. ಪೈಪೋಟಿ ಸಂದರ್ಭ ಕೆಸರು ಗದ್ದೆಯಲ್ಲಿಯೇ ಬಿದ್ದು, ಎದ್ದು ತಮ್ಮ ಕ್ರೀಡಾ ಸ್ಪೂರ್ತಿ ಯನ್ನು ಮೆರೆದರು. ಹಗ್ಗಜಗ್ಗಾಟ, ನಾಟಿ ಓಟ, ಪೈರು ಕೀಳುವದು, ನಾಟಿ ನೆಡುವದು, ದಾರೆ ನಾಟಿ ಮಾಡುವದು, ಪೈರು ಹಿಡಿಯನ್ನು ಎಸೆಯುವದು, ಅಡಿಕೆ ಹಾಳೆಯಲ್ಲಿ ಕುಳ್ಳರಿಸಿ ಎಳೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಸ್ಪರ್ಧಾಳುಗಳು ಬೇಲ್ ನಮ್ಮೆಯನ್ನು ವೀಕ್ಷಿಸಲು ಬಂದ ಸಾವಿರಾರೂ ಪ್ರೇಕ್ಷಕರಿಗೂ ರಸದೌತಣ ನೀಡಿದರು.
ಕಾರ್ಯಕ್ರಮ ಸಂದರ್ಭ ಮುಖ್ಯ ರಸ್ತೆಯಲ್ಲಿ ಒಡ್ಡೋಲಗದೊಂದಿಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭ ಒಡ್ಡೋಲಗಕ್ಕೆ ಹಲವರು ಕುಣಿದು ಕುಪ್ಪಳಿಸಿ ಸಂತಸ ಪಟ್ಟರು. ನಾಟಿ ಸ್ಪರ್ಧೆಯ ಸಂದರ್ಭ ಸಾಂಪ್ರದಾಯಿಕ ಓಯ್ಯಪಾಟ್ ಹಾಡಿ ಸ್ಪರ್ಧಾಳುಗಳನ್ನು ಹುರಿದುಂಬಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕಾನೂರು ಕೊಡವ ಸಮಾಜ, ಕೋತೂರು ಅಮ್ಮ ಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜದ ಸಹಕಾರದಲ್ಲಿ ಕೋತೂರು ಗ್ರಾಮದ ಮನ್ನಕ್ಕಮನೆ ವಾಸು ನಾಣಮಯ್ಯ ಹಾಗೂ ಮನ್ನಕ್ಕಮನೆ ಕಿರಣ್ ಅವರ ಗದ್ದೆಯಲ್ಲಿ ಹಮ್ಮಿಕೊಂಡಿದ್ದ ಬೇಲ್ ನಮ್ಮೆ ಸಾವಿರಾರು ಮಂದಿಯ ಕಣ್ಮನ ತಣಿಸಿತು.
ಆ ಮುನ್ನ ಸಭಾ ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾತನಾಡಿ, ಈ ನೆಲದ ಕೃಷಿಯಲ್ಲಿ ಕೊಡವ ಸಂಸ್ಕøತಿ ಅಡಗಿದೆ. ಆಚರಣೆಯಿಂದ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯವಿದೆ. ನಮ್ಮ ಪೂರ್ವಜರು ಕಷ್ಟ ಪಟ್ಟು ಮಾಡಿಟ್ಟಿರುವ ಈ ಭೂಮಿಯನ್ನು ಪದ್ಧತಿ ಪರಂಪರೆಯಂತೆ ಕೃಷಿ ಮಾಡಿ ಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆಗಿದೆ. ಗದ್ದೆಯನ್ನು ಪಾಳು ಬಿಡಬಾರದು. ಕೊಡವ ಸಂಸ್ಕøತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯು ಕೃಷಿಗೆ ಉತ್ತೇಜನ ನೀಡುವಂತಹ ಬೇಲ್ ನಮ್ಮೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
(ಮೊದಲ ಪುಟದಿಂದ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ, ಕೊಡಗಿನಲ್ಲಿ ಹಿರಿಯರಿಗೆ ಭತ್ತದ ಸಾಂಪ್ರದಾಯಿಕ ಕೃಷಿಯ ಅನುಭವವಿದೆ. ಆದರೆ, ಯುವ ಪೀಳಿಗೆಗೆ ಅದರ ಅರಿವು ಇಲ್ಲ. ನಾವು ಸಂತೋಷದಿಂದ ಭತ್ತದ ನಾಟಿ ಮಾಡಿದ ನಂತರ ವನ್ಯ ಪ್ರಾಣಿಗಳ ಪಾಲಾಗುತ್ತಿದೆ. ಎಲ್ಲರೂ ಗದ್ದೆಗಳನ್ನು ಕೃಷಿಗೆ ಪರಿವರ್ತಿಸಿದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುತ್ತದೆ. ವನ್ಯ ಪ್ರಾಣಿಗಳ ಹಾವಳಿ, ಕೃಷಿ ನಷ್ಟ ಹಾಗೂ ಇತರ ಕಾರಣದಿಂದ ಪಾಳು ಬಿಟ್ಟಿರುವ ಗದ್ದೆಗಳು ಮತ್ತೆ ಕೃಷಿಗೆ ಪರಿವರ್ತನೆ ಮಾಡಲು ಸರಕಾರ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಕಾನೂರು ಗ್ರಾ.ಪಂ ಅಧ್ಯಕ್ಷೆ ಹೆಮ್ಮಚ್ಚಿಮನೆ ಲತಾ ಗಣೇಶ್ ಮಾತನಾಡಿ, ಭತ್ತದ ಕೃಷಿ ಯ ಗತವೈಭವ ಮರುಕಳಿಸಲು ಯುವ ಪೀಳಿಗೆ ಮುಂದಾಗಬೇಕು. ಹಿಂದಿನ ಕಾಲದಲ್ಲಿ ಭತ್ತದ ಗದ್ದೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.
ಮದುವೆಗೆ ಹೆಣ್ಣು ನೀಡಲು ಹುಡುಗನ ಕಡೆಯವರ ಭತ್ತದ ಗದ್ದೆಗಳನ್ನು ಪರಿಗಣಿಸಲಾಗುತ್ತಿತ್ತು. ಹೆಚ್ಚು ಭತ್ತದ ಗದ್ದೆ ಇದ್ದವರಿಗೆ ಹೆಣ್ಣು ಕೊಡಲು ಪ್ರಾಶಸ್ತ್ಯ ನೀಡಲಾಗುತ್ತಿತ್ತು ಎಂದು ನೆನಪಿಸಿದರು.
ಕೋತೂರು ಕಾವೇರಿ ಅಮ್ಮ ಕೊಡವ ಮಹಿಳಾ ಸಮಾಜದ ಕಾರ್ಯದರ್ಶಿ ಮನ್ನಕ್ಕಮನೆ ಆಶ್ವಿನಿ ನಂದಾ ಅವರು “ಬೇಲ್ ಪಣಿ ಅಂದಿಂಜಿಪ್ಪರ” ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.
ವೇದಿಕೆಯಲ್ಲಿ ಕೋತೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಕೋತೂರು-ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ಚೊಟ್ಟೆಕ್‍ಮಾಡ ಮಾಯಮ್ಮ ಬೋಪಯ್ಯ, ಕೆಂಬಟ್ಟಿ ಜನಾಂಗದ ಮುಖಂಡ ಜೋಕುಟ್ಟಡ ನೀಲಾ, ಗ್ರಾ.ಪಂ ಮಾಜಿ ಸದಸ್ಯ ಹೆಚ್.ಪಿ ನಂಜುಂಡ ಮೊದಲಾದವರು ಉಪಸ್ಥಿತರಿದ್ದರು.
ಉಮಾ ಕೃಪ ಪ್ರಾರ್ಥಿಸಿ, ಮಹಿಳಾ ಸಮಾಜ ತಂಡದಿಂದ ನಾಡ ಗೀತೆ ನೆರವೇರಿತು. ಕೇಚಮಾಡ ದಿನೇಶ್ ವೀಕ್ಷಕ ವಿವರಣೆ ಹಾಗೂ ಅಕಾಡೆಮಿ ಸದಸ್ಯರುಗಳಾದ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಹಾಗೂ ಆಂಗೀರ ಕುಸುಂ ನಿರೂಪಿಸಿ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಅಕಾಡೆಮಿಯ ಯೋಜನೆ ಹಾಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಅಜ್ಜಮಾಡ ಕುಶಾಲಪ್ಪ, ಪ್ಯಾನ್ಸಿ ಮುತ್ತಣ್ಣ ಸನ್ಮಾನಿತರ ಪರಿಚಯ ಮಾಡಿದರು. ಬೊಳ್ಳಜಿರ ಅಯ್ಯಪ್ಪ ವಂದಿಸಿದರು.
ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯರನ್ನು ಗುರುತಿಸಿ ಈ ಸಂದರ್ಭ ಸನ್ಮಾನಿಸಲಾಯಿತು. ನಾಡಿನ ಹಿರಿಯರಾದ ಸುಳ್ಳಿಮಾಡ ಜಿ.ತಿಮ್ಮಯ್ಯ, ಮನ್ನಕ್ಕಮನೆ ನಾಣಮಯ್ಯ ಚೆಪ್ಪುಡೀರ ಪಾರ್ವತಿ ಪೊನ್ನಪ್ಪ, ಹೆಮ್ಮಚ್ಚಿಮನೆ ಜಿ.ವಿಠಲ ಅವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರಿಗೆ ಪೈರು ತೆಗೆಯುವ ಸ್ಪರ್ಧೆ, ಪೈರು ನೆಡುವ ಸ್ಪರ್ಧೆ, ಕೆಸರುಗದ್ದೆ ಓಟ, ಕೊಡಿನಾಡಿ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ನೇರ್‍ಪುಡಿ ಎಸೆಯುವ ಸ್ಪರ್ಧೆ, ಅಡಿಕೆ ಪಾಳೆ ಬಲಿಪೊ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಐತಿಚಂಡ ರಮೇಶ್ ಉತ್ತಪ್ಪ, ಟಾಟು ಮೊಣ್ಣಪ್ಪ, ಸುಳ್ಳಿಮಾಡ ಭವಾನಿ ಕಾವೇರಪ್ಪ, ಮನುಮುದ್ದಪ್ಪ, ತೋರೆರ ಮುದ್ದಯ್ಯ, ಕುಡಿಯರ ಶಾರದ, ಮನ್ನಕ್ಕಮನೆ ಬಾಲಕೃಷ್ಣ, ಅಜ್ಜಮಾಡ ಕುಶಾಲಪ್ಪ ಇತರರು ಇದ್ದರು. ರಿಜಿಸ್ಟ್ರ್ರರ್ ಉಮರಬ್ಬ ಸ್ವಾಗತಿಸಿದರು.
-ಚಿತ್ರ ವರದಿ : ಹರೀಶ್ ಮಾದಪ್ಪ