ವೀರಾಜಪೇಟೆ, ಆ. 6: ವಿದೇಶದಿಂದ ಅಕ್ರಮ ವಲಸೆ ಆರೋಪದಡಿಯಲ್ಲಿ ಬಾಂಗ್ಲಾ ದೇಶದ ಪ್ರಜೆ ಶಹರುಲ್ ಇಸ್ಲಾಂಗೆ ಒಂದೂವರೆ ವರ್ಷ ಸಜೆ ರೂ. 5000 ದಂಡ ವಿಧಿಸಿದ್ದಲ್ಲದೆ, ಆಶ್ರಯ ನೀಡಿದ ಇಲ್ಲಿನ ಮೊಗರಗಲ್ಲಿಯ ನಿವಾಸಿ ತಾರೀಖ್ ಶೇಖ್‍ಗೆ ಎರಡು ತಿಂಗಳು 8 ದಿನ ಶಿಕ್ಷೆ ವಿಧಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ತೀರ್ಪು ನೀಡಿದ್ದಾರೆ. ಶಿಕ್ಷೆ ಅವಧಿ ಮುಗಿದ ಬಳಿಕ ಬಾಂಗ್ಲಾ ಪ್ರಜೆಯನ್ನು ಭಾರತದಿಂದ ತವರು ಮನೆ ಬಾಂಗ್ಲಾ ದೇಶಕ್ಕೆ ಕಳುಹಿಸಿ ಕೊಡುವಂತೆ ವೀರಾಜಪೇಟೆ ನಗರ ಪೊಲೀಸರಿಗೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಬಾಂಗ್ಲಾದೇಶದ ರಾಜಾಶಾಹಿ ಜಿಲ್ಲೆಯ ಗುಡಗಿತಾಣದ ನಿವಾಸಿ ಶಹರುಲ್ ಇಸ್ಲಾಂ ಎಂಬಾತ ತಕ್ಷಮ ಪ್ರಾಧಿಕಾರದಿಂದ ಯಾವದೇ ವೀಸಾ, ಪಾಸ್‍ಪೋರ್ಟ್ ಪಡೆದುಕೊಳ್ಳದೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದು ವೀರಾಜಪೇಟೆಯ ಮೊಗರಗಲ್ಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಬಾಂಗ್ಲಾ ಪ್ರಜೆ ಶೆಹರುಲ್ ಇಸ್ಲಾಂಗೆ ಮೊಗರಗಲ್ಲಿಯ ತಾರೀಖ್‍ಶೇಖ್ ಮನೆಯಲ್ಲಿ ಆಶ್ರಯ ನೀಡಿದ್ದ. ತಾರೀಖ್ ಶೇಖ್‍ಗೆ ಈತ ಬಾಂಗ್ಲಾ ದೇಶದವನು ಎಂಬ ವಿಷಯ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಆರೋಪಿ ಶಹರುಲನನ್ನು ತನ್ನೊಂದಿಗೆ ಕೂಲಿ ಕೆಲಸಕ್ಕೆ ಬಳಸಿಕೊಂಡು
(ಮೊದಲ ಪುಟದಿಂದ) ಅಗಿಂದಾಗ್ಗೆ ಬಾಂಗ್ಲಾ ದೇಶಕ್ಕೆ ಹೋಗಿ ಬರಲು ತಾರೀಖ್ ಅನುವು ಮಾಡಿ ಕೊಟ್ಟಿದ್ದ. ಶಹರುಲ್ ಇಸ್ಲಾಂ ಬಾಂಗ್ಲದಿಂದ ವಾಪಸ್ಸು ಬರಲು ತಾರೀಖ್ ಶೇಖ್ ಪ್ರಚೋದಿಸಿರುವದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸಾಕ್ಷಿಗಳಿಂದ ಸಾಬೀತಾದ ಕಾರಣ ಆರೋಪಿಗಳ ಮೇಲೆ ಕಲಂ 14 ವಿದೇಶ ಅಧಿ ನಿಯಮ 1946/12(ಎ) (ಬಿ) ತಿದ್ದುಪಡಿ ಬಿಲ್ (2000) ಐಪಿಸಿ ಸೆಕ್ಷನ್ 114 ರ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ವೀರಾಜಪೇಟೆ ನಗರ ಪೋಲಿಸರು 18.04.18ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿಗಳನ್ನು 20.02.17 ರಂದು ಬಂದಿಸಲಾಗಿತ್ತು.
ತಾ. 24.05.17 ರಿಂದ ವಿಚಾರಣೆ ಪ್ರಾರಂಭಗೊಂಡು ಒಟ್ಟು 14 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ 32 ದಾಖಲೆಗಳನ್ನು ಗುರುತಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.