ಮಡಿಕೇರಿ, ಆ. 6: ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು, ಹಾರಂಗಿ ನಾಲೆ ದಂಡೆಯಲ್ಲಿ ಹತೋಟಿ ತಪ್ಪಿದ ಪರಿಣಾಮ ವಾಹನ ಸಹಿತ ನೀರುಪಾಲಾಗಿ ಸಾವನ್ನಪ್ಪಿದ ದುರ್ಘಟನೆ ಕೊಡಗಿನ ಗಡಿ ಮಂಟಿಕೊಪ್ಪಲುವಿನಲ್ಲಿ ಸಂಭವಿಸಿದೆ. ನಾಪೋಕ್ಲುವಿನ ಇಂದಿರಾ ನಗರ ನಿವಾಸಿಗಳಾದ ಪಳನಿಸ್ವಾಮಿ (45) ಪತ್ನಿ ಸಂಜುಕುಮಾರಿ(34) ಪುತ್ರಿ ಪೂರ್ಣಿಮಾ (18) ಹಾಗೂ ಪುತ್ರ ನಿಖಿತ್ (15) ಎಂಬವರೇ ಮೃತ ದುರ್ದೈವಿಗಳು.

ನಿನ್ನೆ ಬೆಳಿಗ್ಗೆ ನಾಪೋಕ್ಲುವಿನಿಂದ ಪಳನಿಸ್ವಾಮಿ ತಮ್ಮ ಮಾರುತಿ ವ್ಯಾನ್‍ನಲ್ಲಿ (ಕೆ.ಎ. 12 ಎಂ. 1636) ಪತ್ನಿ ಹಾಗೂ ಮಕ್ಕಳೊಂದಿಗೆ ಕುಶಾಲನಗರ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರಳ್ಳಿ ಅಂಚೆ ಕಚೇರಿಗೆ ತೆರಳಿದ್ದಾರೆ. ಅಲ್ಲಿ ತಮ್ಮಿಬ್ಬರು ಮಕ್ಕಳ ಅಂಗವೈಕಲ್ಯ ಮಾಸಾಸನ ಪಡೆದು ಕೊಂಡು, ಚಲಕಲ್ ಬಳಿಯ ಲಕ್ಷ್ಮೀಪುರದ ತಮ್ಮ ಹೊಲಕ್ಕೆ ಹೋಗುತ್ತಿದ್ದರೆನ್ನಲಾಗಿದೆ. ಈ ವೇಳೆ ಹಾರಂಗಿ ನಾಲೆಯು ಅಲ್ಲಿದ್ದು, ಪ್ರಸಕ್ತ ತುಂಬಿ ಹರಿಯುವ ನಾಲೆ ನೀರಿನ ದಂಡೆಯ ಮೂಲಕ ಸಾಗುತ್ತಿದ್ದ ವಾಹನ ಪಳನಿಸ್ವಾಮಿ ಅವರ ನಿಯಂತ್ರಣ ತಪ್ಪಿ ನಾಲೆಯೊಳಗೆ ಮಗುಚಿಕೊಂಡಿದ್ದಾಗಿ ಗೊತ್ತಾಗಿದೆ. ಪರಿಣಾಮ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಸಂಭವಿಸಿದ ಈ ಅವಘಡದಿಂದ ನಾಲ್ವರು ಕೊನೆಯುಸಿ ರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆ ಮಾಹಿತಿ ಮೇರೆಗೆ ಅಲ್ಲಿನ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿ ಸಹಿತ ನಾಲೆಯಲ್ಲಿ ಮುಳುಗಿದ ವಾಹನವನ್ನು, ದುರ್ದೈವಿ ಕುಟುಂಬದ ನಾಲ್ವರ ಶವಗಳ ಸಹಿತ ಹೊರತೆಗೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಘಟನೆ ವಿವರ: ಸೋಮವಾರ ಬೆಳಿಗ್ಗೆ 10.15 ಗಂಟೆಗೆ ನಾಪೆÇೀಕ್ಲುವಿನಿಂದ ತಮ್ಮ ತಾಯಿಯ ಊರಾದ ಮುತ್ತಿನ ಮುಳ್ಳುಸೋಗೆ ಗ್ರಾಮಕ್ಕೆ ಪಳನಿಸ್ವಾಮಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ತೆರಳಿದ್ದರು. ಸುಮಾರು 12.30 ಗಂಟೆ ಅಂದಾಜಿಗೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಕಮರಹಳ್ಳಿ ಗ್ರಾಮದ ಹಾರಂಗಿ ನಾಲೆಯಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ವಾಹನ ನಾಲೆಗೆ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂಗವಿಕಲ ಮಕ್ಕಳು: ಪಳನಿಸ್ವಾಮಿಯ ಮಗಳು ಪೂರ್ಣಿಮ ಸ್ವಲ್ಪ ಪ್ರಮಾಣದ ಅಂಗವೈಕಲ್ಯತೆ ಹೊಂದಿದ್ದಳು. ಹಾಗೂ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಪಡೆದಿದ್ದಳು. ಆದರೆ, ಮಗ ನಿಕಿತ್ ಪೂರ್ತಿ ಪ್ರಮಾಣದ ಅಂಗವೈಕಲ್ಯತೆ ಹೊಂದಿದ್ದ ಕಾರಣ ಅವನನ್ನು ಶಾಲೆಗೆ ಸಹ ದಾಖಲಿಸಿರಲಿಲ್ಲ. ದುರ್ಘಟನೆ ಸಂದರ್ಭದಲ್ಲಿ ನಾಲ್ವರು ಸೀಟ್ ಬೆಲ್ಟ್ ಧರಿಸಿದ್ದರು.

(ಮೊದಲ ಪುಟದಿಂದ)

ಬದುಕುಳಿದ ತಾಯಿ: ಪಳನಿಸ್ವಾಮಿ ತಮ್ಮ ತಾಯಿಯ ಊರಿಗೆ ತೆರಳುತ್ತಿದ್ದ ವೇಳೆ ತಾಯಿ ಕರ್ಪಮ್ಮ ಅವರನ್ನು ನಾಪೆÇೀಕ್ಲುವಿನ ಮನೆಯಲ್ಲಿಯೇ ಬಿಟ್ಟು ಹೋಗಿರುವ ಕಾರಣ ಅವರು ಬದುಕುಳಿಯುವಂತಾಗಿದೆ. ಈ ಬಗ್ಗೆ ಬೆಟ್ಟದಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹಗಳ ಶವ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲಾಯಿತು. ಅಂತ್ಯಕ್ರಿಯೆ ತಾ. 7 ರಂದು (ಇಂದು) ನಾಪೆÇೀಕ್ಲುವಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- ನಾಗರಾಜ ಶೆಟ್ಟಿ, ಪ್ರಭಾಕರ್