ಕುಶಾಲನಗರ, ಆ. 6: ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಭಾನುವಾರ ತಡರಾತ್ರಿ ಕುಶಾಲನಗರದಲ್ಲಿ ನಡೆದಿದೆ. ಪಟ್ಟಣದ ಹೋಟೆಲ್ ತಾಜ್ ಬಳಿ ಘಟನೆ ನಡೆದಿದ್ದು ಅಭಿಮನ್ಯುಕುಮಾರ್ ಅವರ ಕಾರನ್ನು ಚಾಲಕ ಹಿಂದಕ್ಕೆ ಚಾಲಿಸುತ್ತಿದ್ದ ಸಂದರ್ಭ ಹಿಂಬದಿ ಯಿಂದ ಬರುತ್ತಿದ್ದ ಬೈಕ್ ಒಂದಕ್ಕೆ ಡಿಕ್ಕಿಯಾಗಿದೆ. ಇದರಿಂದ ಆಕ್ರೋಶ ಗೊಂಡ ಹೊಟೇಲ್ ಮಾಲೀಕ ತಾಜುದ್ದಿನ್ ಎಂಬಾತ ಕಾರು ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ಬಿಡಿಸಲು ಹೋದ ಅಭಿಮನ್ಯುಕುಮಾರ್ ಮೇಲೆ ತಾಜುದ್ದಿನ್ ಮತ್ತು ಆತನ ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕುಶಾಲನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ತಾಜುದ್ದಿನ್ ಮತ್ತು ಮಹಮ್ಮದ್ ರಿಜ್ವಾನ್ ಎಂಬವರ ಮೇಲೆ ಮೊಕದ್ದಮೆ ದಾಖಲಾಗಿದೆ.

ಖಂಡನೆ : ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯುಕುಮಾರ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಕುಶಾಲನಗರ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ವೆಂಕಟರಮಣ ರಾವ್, ಕಾರ್ಯದರ್ಶಿ ಕೆ.ಬಿ.ಮೋಹನ್, ಪದಾಧಿಕಾರಿಗಳಾದ ಸಂತೋಷ್, ಪಾಲಾಕ್ಷ, ರಾಬಿನ್, ನಳಿನಿಕುಮಾರಿ ಮತ್ತಿತರರು ಇದ್ದರು.

ವಕೀಲರ ಮೇಲೆ ಹಲ್ಲೆ - ಕಲಾಪ ಬಹಿಷ್ಕಾರ

ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಎಂ.ಬಿ. ಅಭಿಮನ್ಯು ಕುಮಾರ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ವಕೀಲರುಗಳು ಸೋಮವಾರದಂದು ನ್ಯಾಯಾಲಯದ ಕಾರ್ಯ ಕಲಾಪವನ್ನು ಬಹಿಷ್ಕರಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಲ್ಲೆ ನಡೆಸಿದ ಈರ್ವರು ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ವಕೀಲರ ಮೇಲಿನ ಇಂತಹ ಹಲ್ಲೆ ಪ್ರಕರಣಗಳಿಗೆ ತಡೆ ಹಾಕಬೇಕು ಎಂದು ಆಗ್ರಹಿಸಿ ಕಲಾಪವನ್ನು ಬಹಿಷ್ಕರಿಸಿದರು.

ಈ ಸಂದರ್ಭ ಪದ್ಮನಾಭ್, ಚಿಣ್ಣಪ್ಪ, ಹರೀಶ್, ಮನೋಹರ್, ಡಿ.ಕೆ. ತಿಮ್ಮಯ್ಯ, ಬಿ.ಜೆ. ದೀಪಕ್, ಹೇಮಚಂದ್ರ, ಚನ್ನಬಸವಯ್ಯ, ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಡವ ಸಮಾಜ ಖಂಡನೆ: ಇಲ್ಲಿನ ವಕೀಲರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಅವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿರುವ ಪ್ರಕರಣವನ್ನು ಸ್ಥಳೀಯ ಕೊಡವ ಸಮಾಜ ಖಂಡಿಸಿದೆ.

ಈ ಕುರಿತು ಸೋಮವಾರ ಕೊಡವ ಸಮಾಜ ಕಚೇರಿಯಲ್ಲಿ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ, ಘಟನೆಯನ್ನು ಖಂಡಿಸ ಲಾಯಿತು. ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ, ಖಜಾಂಜಿ ಮಣವಟ್ಟೀರ ಹರೀಶ್ ಅಯ್ಯಣ್ಣ, ನಿರ್ದೇಶಕರುಗಳಾದ ಆಪಾಡಂಡ ವೀರರಾಜು, ಸೋಮಯ್ಯ, ಮೈನಾ, ಸುಬ್ರಮಣಿ, ಸರು ಬೊಳ್ಳಮ್ಮ ಉಪಸ್ಥಿತರಿದ್ದರು.

ಬಿಜೆಪಿ ಖಂಡನೆ: ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮೇಲಿನ ಹಲ್ಲೆಯನ್ನು ತಾಲೂಕು ಬಿಜೆಪಿ ಖಂಡಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಕ್ಷದ ಮುಖಂಡರಾದ ಮನುಕುಮಾರ್ ರೈ, ಸೋಮೇಶ್, ಪ್ರಕಾಶ್, ಶ್ರೀಕಾಂತ್, ಪಿ. ಮಧು, ಶರತ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.