ಸೋಮವಾರಪೇಟೆ, ಆ. 5: ಸಮೀಪದ ಬೇಳೂರು ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಯಲ್ಲಿರುವ ಸೀಗಲುಡುವೆ-ಪುಟ್ಟನಕೊಪ್ಪಲು ರಸ್ತೆ ತೀರಾ ಹಾಳಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ರಸ್ತೆಯ ಮಧ್ಯೆ ನಿರ್ಮಾಣವಾಗಿರುವ ಹೊಂಡ ಗುಂಡಿಗಳಲ್ಲಿ ಕೆಸರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ವ್ಯಾಪ್ತಿಯ ವಿದ್ಯಾರ್ಥಿಗಳು ದಿನಂಪ್ರತಿ ಶಾಲಾ-ಕಾಲೇಜಿಗೆ ತೆರಳಲು ಇದೇ ರಸ್ತೆಯನ್ನು ಅವಲಂಭಿಸಿದ್ದು, ಶಾಲಾ ವಾಹನಗಳನ್ನು ಓಡಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ.

ಆಟೋಗಳಲ್ಲಿ ತೆರಳುವ ವಿದ್ಯಾರ್ಥಿಗಳು ಈ ಸ್ಥಳದಲ್ಲಿ ಇಳಿದು ಆಟೋವನ್ನು ತಳ್ಳಬೇಕಾಗಿದೆ. ಸ್ಥಳೀಯರೇ ಶ್ರಮದಾನ ನಡೆಸಿ ಗುಂಡಿಗಳಿಗೆ ಮಣ್ಣು ತುಂಬಿಸಿದ್ದರೂ ರಸ್ತೆ ಮಾತ್ರ ಸಂಚಾರಕ್ಕೆ ಯೋಗ್ಯವಾಗಿಲ್ಲ.

ತಕ್ಷಣ ಈ ರಸ್ತೆಯನ್ನು ವಿಶೇಷ ಪ್ಯಾಕೇಜ್ ಅಥವಾ ಇತರ ಯೋಜನೆಯಡಿ ದುರಸ್ತಿಪಡಿಸಲು ಸಂಬಂಧಿಸಿದವರು ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.