ವೀರಾಜಪೇಟೆ, ಆ. 5: ಯಾವದೇ ಸಮುದಾಯ ಬೆಳವಣಿಗೆ ಪ್ರಗತಿಯನ್ನು ಕಾಣಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಸಮುದಾಯದ ಮುನ್ನಡೆ ಸಾಧ್ಯ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ಕೊಡವ ಮುಸ್ಲೀಂ ಅಸೋಸಿಯೇಶನ್ ವತಿಯಿಂದ ಇಂದು ಇಲ್ಲಿನ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕೆ.ಎಂ.ಎ. ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋಪಯ್ಯ ಕೊಡಗಿನ ಮುಸ್ಲಿಂ ಬಾಂಧವರು ಹಿಂದಿನಿಂದಲೂ ತನ್ನದೇ ಆದ ನೆಲೆಗಟ್ಟಿನಲ್ಲಿ ಕೃಷಿಯ ಜೊತೆಯಲ್ಲಿ ಹಿರಿಯ ಪೂರ್ವಜರ ಆಚಾರ ವಿಚಾರವನ್ನು ತನ್ನದೇ ಆದ ಛಾಪದಲ್ಲಿ ಮೂಡಿಸಿ ಉಳಿಸಿಕೊಂಡು ಬಂದಿದ್ದು ಇಂದಿಗೂ ಇದು ಆಚರಣೆಯಲ್ಲಿದೆ.

ಮುಸ್ಲಿಂ ಸಂಘಟನೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವರ್ಷಂಪ್ರತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ವಿತರಣೆಯೊಂದಿಗೆ ಗೌರವವನ್ನು ಸಲ್ಲಿಸುತ್ತಿದೆ. ಇದರಿಂದಲೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಸಾಧ್ಯವಾಗಲಿದೆ. ಸಂಘಟನೆ ಸೇವಾ ಮನೋಭಾವದಿಂದ ಶಿಕ್ಷಣದಲ್ಲಿ ಸಮುದಾಯಕ್ಕೆ ಸಹಾಯ ಹಸ್ತ ನೀಡಿ ಕೊಡಗಿಗೆ ಮಾದರಿಯಾಗಿರುವದರಿಂದ ಮುಂದೆ ಈ ಸಂಘಟನೆ ಸರ್ವತೋಮುಖ ಪ್ರಗತಿ ಬೆಳವಣಿಗೆಯಿಂದ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವರು ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಎಂ.ಸಿ.ನಾಣಯ್ಯ ಮಾತನಾಡಿ ದೇವರ ನಾಮ ಬೇರೇ ಬೇರೇಯಾದರೂ ಧರ್ಮ ಎಂಬದು ಎಲ್ಲರಿಗೂ ಒಂದೇ. ಇದರಲ್ಲಿ ಅವರವರ ಪದ್ಧತಿ ಆಚಾರ ವಿಚಾರವೂ ಬೇರೆಯಾಗಿದೆ. ಜಾತೀಯ ಕಂದಕದಿಂದ ಮನುಷ್ಯ ಹೊರ ಬಂದರೆ ಸುಖೀ ಬಾಳ್ವೇ ನಡೆಸಲು ಸಾಧ್ಯ. ಜಾತಿಯ ವಿಷ ಬೀಜದಿಂದ ಸಮುದಾಯದ ಸಮಾಜ ಒಡೆಯಲು ಸಾಧ್ಯ. ಸಮಾಜದಲ್ಲಿ ಜಾತ್ಯಾತೀತ ಮನೋ ಭಾವನೆ ಬೆಳೆದರೆ ಮಾತ್ರ ವಿಶ್ವ ಮಾನವನಾಗಲು ಸಾಧ್ಯ ಎಂದರು. ಇಂದು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಸಾಧನೆ ಮಾಡಿರುವದನ್ನು ಅವಲೋಕಿಸಿದಾಗ ವಿದ್ಯೆಯಲ್ಲಿ ಗಂಡು ಮಕ್ಕಳನ್ನು ಮೀರಿಸಿದ್ದಾರೆ. ಇಂತಹ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವದು ಪ್ರಶಂಸನೀಯ. ಕೊಡಗು ಮುಸ್ಲಿಂ ಅಸೋಸಿಯೇಶನ್‍ನ ಸೇವಾ ಭಾವನೆಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇದರಿಂದ ಜಾತ್ಯತೀತ ಮನೋಭಾವನೆಯ ಶಾಂತಿ ನೆಮ್ಮದಿಯ ಸುಭದ್ರ ವಿಶ್ವ, ದೇಶ ಕಟ್ಟಲು ಸಾಧ್ಯವಾಗಲಿದೆ ಎಂದು ಹೇಳಿದರು.

ಲೇಖಕರು, ಕೊಡಗಿನ ಸಾಹಿತಿ ಹಾಗೂ ಕೊಡಗು ಬ್ಯಾರೀಸ್ ವೆಲ್ಪೇರ್ ಟ್ರಸ್ಟ್‍ನ ಅಧ್ಯಕ್ಷ ಬಿ.ಎ.ಷಂಶುದ್ದೀನ್ ದಿಕ್ಸೂಚಿ ಭಾಷಣ ಮಾಡಿ ನಾವುಗಳು ಹೆಚ್ಚು ಸುಶಿಕ್ಷಿತರಾದಂತೆ ಧರ್ಮದ ಹೆಸರಿನಲ್ಲಿ ಜನಾಂಗದ ಹೆಸರಿನಲ್ಲಿ ಹೊಡೆದಾಡುವದು (ಮೊದಲ ಪುಟದಿಂದ) ಬಡಿದಾಡುವದು ಸಾಮಾನ್ಯವಾಗಿದೆ. ದಶಕದ ಹಿಂದಿನ ಶಿಕ್ಷಣ, ಇಂದಿನ ಶಿಕ್ಷಣವನ್ನು ತುಲನೆ ಮಾಡಿದಾಗ ಜಾತೀಯವಾಗಿ ಕಾದಾಟ, ದ್ವೇಷ ಹೆಚ್ಚಿದೆ. ಶಿಕ್ಷಣ ಮಾನವೀಯವಾಗಿ ಬೆಳಕನ್ನು ತೋರಿಸಿದರೂ ಹೆಚ್ಚಿನ ಶಿಕ್ಷಣದಿಂದ ಸಮಾಜ ಜಾತೀಯ ದ್ವೇಷದಿಂದ ಪರಸ್ಪರ ಪ್ರೀತಿ ಸಹಕಾರವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಸಮಾಜದಲ್ಲಿ ಖಾಸಗಿ ಸರಕಾರೀ ವಿದ್ಯಾ ಸಂಸ್ಥೆಗಳೆಂದು ತಾರತಮ್ಯವಿದ್ದರೂ ಯಾವ ಸಂಸ್ಥೆಯಲ್ಲಿಯೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.

ಮುಸ್ಲಿಂ ಸಮುದಾಯದ ಪದ್ಧತಿಯ ದಫ್ ಬಾರಿಸಿ ಸಮಾರಂಭವನ್ನು ಉದ್ಘಾಟಿಸಿದ ಎಡಪಾಲದ, ರಾಜ್ಯ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕಿಕ್ಕರೆರ ಎ. ಉಮ್ಮರ್ ಮಾತನಾಡಿ ಶಿಕ್ಷಣ ಎಂದರೆ ಮಾನವನನ್ನು ಕತ್ತಲೆಯಿಂದ ಬೆಳಕಿನೆಡೆಗೊಯ್ಯುವ ವಸ್ತುವಾಗಿದ್ದು ಶಿಕ್ಷಣ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಶನಿನ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆ ಸಮಾಜ ಸೇವೆಯಾಗಿ ಪ್ರತಿ ವರ್ಷ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿದ್ಯಾರ್ಥಿ ವೇತನ ದೊಂದಿಗೆ ಗೌರವಿಸುತ್ತದೆ. ಸಮು ದಾಯದ ಬಡ ಮಕ್ಕಳು ವಿದ್ಯೆಯಲ್ಲಿ ಮುಂದುವರೆಯಬೇಕೆಂದು ಸಂಘಟನೆ ಸಹಾಯಹಸ್ತ ನೀಡುತ್ತಿದೆ. ಇದಕ್ಕೆ ಸಮುದಾಯದ ಪ್ರಮುಖರು ಸಹಾಯ ನೀಡುತ್ತಿದ್ದಾರೆ. ದಾನಿಗಳ ಸಹಕಾರವನ್ನು ಈ ಸಂದರ್ಭದಲ್ಲಿ ಸಂಘಟನೆ ಸ್ಮರಿಸುವದಾಗಿ ಹೇಳಿದರು. ಕೊಡವ ಮುಸ್ಲೀಂ ಅಸೋಸಿ ಯೇಶನ್‍ನ ಸ್ಥಾಪಕ ಅಧ್ಯಕ್ಷ ಕುವೇಂಡ ವೈ. ಹಂಝುತುಲ್ಲಾ ಮಾತನಾಡಿ 40 ವರ್ಷಗಳಿಂದಲೂ ಸಂಘಟನೆ ಮುಸ್ಲಿಂ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆ ಕುರಿತು ವಿವರಿಸಿದರು.

ಇದೇ ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಕೇಂದ್ರ ಪೊಲೀಸ್ ಮೀಸಲು ಪಡೆಯ ಡೆಪ್ಯುಟಿ ಕಮಾಂಡೆಂಟ್ ಕೂತಪಟ್ಟೀರ ಎಂ. ಹಸೈನಾರ್ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಉಪಸ್ಥಿತರಿದ್ದರು. ಸಂಘಟನೆ ಗುರುತಿಸಿದ ಪ್ರತಿಭಾವಂತ ಸುಮಾರು 30 ವಿದ್ಯಾರ್ಥಿಗಳಿಗೆ ತಲಾ ರೂ 10,000 ದಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘಟನೆ ಯ ಉಪಾಧ್ಯಕ್ಷ ಡಾ. ಜೆ.ಪಿ. ಕುಂಞÂಅಬ್ದುಲ್ಲಾ ಸ್ವಾಗತಿಸಿ, ಸಂಘಟನೆ ಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ನಿರೂಪಿಸಿ, ಸಂಘಟನೆಯ ಮಿತಲತಂಡ ಇಸ್ನಾಯಿಲ್ ವಂದಿಸಿದರು.