ವೀರಾಜಪೇಟೆ, ಆ. 5: ಕಳೆದ 50 ದಿನಗಳ ಹಿಂದೆ ಭಾರೀ ಮಳೆಗೆ ದುರಸ್ತಿಗೊಳಗಾದ ಪೆರುಂಬಾಡಿ ಮಾಕುಟ್ಟ ಕೂಟುಹೊಳೆ ಸಂಪರ್ಕ ರಸ್ತೆ ಮಾಕುಟ್ಟದಲ್ಲಿ ಹಾನಿಗೊಳಗಾಗಿರು ವದರಿಂದ ಸುರತ್ಕಲ್‍ನಲ್ಲಿರುವ ಕೇಂದ್ರ ಸರಕಾರದ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡ ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾಕುಟ್ಟಕ್ಕೆ ಭೇಟಿ ನೀಡಿ ಬಿರುಕು ಬಿಟ್ಟಿರುವ ಹಾನಿಗೊಳಗಾದ ರಸ್ತೆಯನ್ನು ಪರಿಶೀಲಿಸಿ ರಸ್ತೆ ನಿರ್ಮಿಸಿ ರಸ್ತೆಯ ಭದ್ರತೆಯನ್ನು ಕಾಪಾಡಲು ಸಲಹೆ ಹಾಗೂ ಸಿದ್ಧ ನಕಾಶೆಯನ್ನು ನೀಡಲಿದೆ.ಕೊಡಗು-ಕೇರಳ ಸಂಪರ್ಕ ರಸ್ತೆ ಹಾನಿಗೊಳಗಾದುದರಿಂದ ಇದನ್ನು ಸಮರ್ಪಕವಾಗಿ, ಶಾಶ್ವತವಾಗಿ ದುರಸ್ತಿ ಪಡಿಸಲು ಇಲಾಖೆ ಸರಕಾರಕ್ಕೆ ಅಂದಾಜು ವೆಚ್ಚ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದ ಮೇರೆ ಸರಕಾರ ರೂ. ಆರು ಕೋಟಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈಚೆಗೆ ಮಾಕುಟ್ಟದ ಹಾನಿಗೊಳಗಾದ ರಸ್ತೆಗೆ ಬೆಂಗಳೂರಿ ನಲ್ಲಿರುವ ಗಣಿ ಭೂ ವಿಜ್ಞಾನಿಗಳ ತಾಂತ್ರಿಕ ತಜ್ಞರು ಭೇಟಿ ನೀಡಿ ರಸ್ತೆ ಬದಿ ಕುಸಿದಿರುವ ಭಾಗದ ಮಣ್ಣು ಪರೀಕ್ಷೆ ಮಾಡಿದ್ದು ಇನ್ನಷ್ಟೇ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ.

(ಮೊದಲ ಪುಟದಿಂದ)

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನ ತಜ್ಞರ ತಂಡ ರಸ್ತೆ ಹಾನಿ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ವೈಜ್ಞಾನಿಕವಾಗಿ ರಸ್ತೆಯ ವಿನ್ಯಾಸ ಜೊತೆಗೆ ಅದಕ್ಕೆ ಬಳಸಬಹುದಾದ ಸಾಮಗ್ರಿಗಳ ಕುರಿತು ನಕಾಶೆಯೊಂದಿಗೆ ಇಲಾಖೆಗೆ ಮಾಹಿತಿ ನೀಡಲಿದ್ದಾರೆ.

ಇತ್ತೀಚೆಗೆ ಭೂ ಗಣಿ ವಿಜ್ಞಾನಿಗಳು ಮಾಕುಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು ಹಾಗೂ ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂ. ಸುರೇಶ್, ಸಿಬ್ಬಂದಿಗಳು ಹಾಜರಿದ್ದರು.