ಮಡಿಕೇರಿ, ಆ. 5: ಕರ್ನಾಟಕ ರಾಜ್ಯ ಜನತಾದಳ ಜಾತ್ಯತೀತ ಘಟಕದ ಅಧ್ಯಕ್ಷರಾಗಿ, ಕೊಡಗು-ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ರಾಜ್ಯದ ಮಾಜಿ ಶಿಕ್ಷಣ ಸಚಿವ ಅಡಗೂರು ಹೆಚ್. ವಿಶ್ವನಾಥ್ ಅವರು ಆಯ್ಕೆಗೊಂಡಿದ್ದಾರೆ.ಇಂದು ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಸಮ್ಮುಖ ನಡೆದ ಪಕ್ಷದ ಸಭೆಯಲ್ಲಿ ಹುಣಸೂರು ಕ್ಷೇತ್ರದ ಹಾಲಿ ಶಾಸಕರು ಆಗಿರುವ ವಿಶ್ವನಾಥ್ ಅವರ ಹೆಸರನ್ನು ಘೋಷಿಸಲಾಯಿತು.ಇದುವರೆಗೆ ರಾಜ್ಯಾಧ್ಯಕ್ಷರಾಗಿದ್ದ ಹಾಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ವರಿಷ್ಠರೊಂದಿಗೆ ಜೆಡಿಎಸ್ ಮುಖಂಡರ ಸಮಕ್ಷಮದಲ್ಲಿ ನೂತನ ಅಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಪಕ್ಷದ ಧ್ವಜದೊಂದಿಗೆ ಅಧಿಕಾರ ಹಸ್ತಾಂತರಿಸಿದರು.
‘ಹಳ್ಳಿಹಕ್ಕಿ’ ಆತ್ಮಕಥನದೊಂದಿಗೆ, ಕಾಂಗ್ರೆಸ್‍ನೊಂದಿಗೆ ಮುನಿಸಿಕೊಂಡು, ಕಳೆದ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದ ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಂಡು ಹುಣಸೂರಿನಿಂದ ಶಾಸಕರಾಗಿ ಜಯಗಳಿಸಿದ್ದರು. ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಒಳಬೇಗುದಿಯಲ್ಲಿ ಸಿಲುಕಿದ್ದ ಅವರಿಗೆ ಇದೀಗ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿರುವ ಜೆಡಿಎಸ್ ವರಿಷ್ಠ ದೇವೇಗೌಡರ ನಡೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಈ ಹೊಣೆಗಾರಿಕೆ ವಹಿಸಿಕೊಂಡಿರುವ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿ, ಬಹುದೊಡ್ಡ ಜವಾಬ್ದಾರಿಯನ್ನು ತಮ್ಮ ಮೇಲೆ ವಿಶ್ವಾಸವಿಟ್ಟು, ಹೊರಿಸಿದ್ದು, ಆ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಆಶಯದಂತೆ ಮುನ್ನಡೆಯುವೆ ಎಂದು ತಿಳಿಸಿದ್ದಾರೆ