ಮಡಿಕೇರಿ, ಆ. 5: ಕೊಡಗು ಪೊಲೀಸ್ ಸಶಸ್ತ್ರಪಡೆಯ 22 ಹುದ್ದೆಗಳಿಗೆ ಹಾಗೂ ರಾಜ್ಯದ 688 ಹುದ್ದೆಗಳಿಗೆ ಇಂದು ಸಾವಿರಾರು ಸಂಖ್ಯೆಯ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಒಟ್ಟು ಐದು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಿತು. 1933 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 416 ಮಂದಿ ಗೈರು ಹಾಜರಾಗಿದ್ದರೆ, 1517 ಮಂದಿ ಪರೀಕ್ಷೆ ಬರೆದಿದ್ದಾರೆ.ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ಸಂತ ಮೈಕಲರ ಶಾಲೆ, ಸಂತ ಜೋಸೆಫರ ಶಾಲೆ ಹಾಗೂ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಸಲಾಯಿತು. ಬೆಳಿಗ್ಗೆ 10 ಗಂಟೆಯೊಳಗೆ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳನ್ನು ಬರಮಾಡಿ ಕೊಳ್ಳಲಾಯಿತು. ಆ ಬಳಿಕವೂ ಆವರಣದೊಳಗೆ ಪ್ರವೇಶಿಸಲು 20 ನಿಮಿಷಗಳ ಕಾಲಮಿತಿಯೊಂದಿಗೆ 10.30ರಿಂದ 12 ಗಂಟೆ ಅವಧಿಗೆ ಪರೀಕ್ಷೆ ನಡೆಸಲಾಯಿತು.
ಅಭ್ಯರ್ಥಿಗಳಿಗೆ ಅಂದಾಜು 20 ಪುಟಗಳಿಂದ ಕೂಡಿದ 100 ಅಂಕಗಳಿಗೆ ಸೀಮಿತ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದು, ಬಹುತೇಕ ಅಭ್ಯರ್ಥಿಗಳು ಪರೀಕ್ಷೆಯು ಸುಲಭವಿದ್ದುದಾಗಿ ‘ಶಕ್ತಿ’ ಯೊಂದಿಗೆ ಅನಿಸಿಕೆ ಹಂಚಿಕೊಂಡರು. ಜಿಲ್ಲೆಯ 22 ಹುದ್ದೆಗಳಿಗೆ ಕೊಡಗಿನ ಅಭ್ಯರ್ಥಿಗಳು ಕೈ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅರ್ಜಿಗಳನ್ನು ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದು, ಬಹುಪಾಲು ಯುವಕರು ಉತ್ತರ ಕರ್ನಾಟಕದ ಭಾಗದಿಂದ ಆಗಮಿಸಿದ್ದು ಗಮನಕ್ಕೆ ಬಂತು.
ಇಂದು ನಡೆದ ಲಿಖಿತ ಪರೀಕ್ಷೆಯು
(ಮೊದಲ ಪುಟದಿಂದ) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಡೆಸಲಾಗಿದ್ದರೂ, ಹೊರ ಜಿಲ್ಲೆಗಳ ಹೆಚ್ಚಿನ ಯುವಕರು ಕೊಡಗಿನಿಂದ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿರುವದರೊಂದಿಗೆ, ಇಲ್ಲಿಯೇ ಪರೀಕ್ಷೆಗೆ ಹಾಜರಾಗಿದ್ದರಿಂದ ಪರೀಕ್ಷೆ ಬರೆದವರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದ್ದು, ಐದು ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕಾಯಿತು ಎಂದು ಗೊತ್ತಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲೂ ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಐದು ಕೇಂದ್ರಗಳ ಉಸ್ತುವಾರಿ ಗಮನಿಸುತ್ತಿದ್ದದ್ದು ಗೋಚರಿಸಿತು.