ಸೋಮವಾರಪೇಟೆ, ಆ. 5: ಕಳೆದ 2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಘೋಷಣೆಯಾದ ವಿಶೇಷ ಪ್ಯಾಕೇಜ್‍ನಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರಿಗೆ ಇಂದಿಗೂ ಹಣ ಪಾವತಿಯಾಗಿಲ್ಲ. ಬಡ್ಡಿಗೆ ಸಾಲ ಪಡೆದು ಕೆಲಸ ಮಾಡಿದ್ದು, ಇನ್ನು ಮುಂದೆ ಕೆಲಸ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿರುವ ತಾಲೂಕಿನ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರು, ಇಲಾಖೆಯ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದು, ಅದರಂತೆ ಇಂದು ಸೋಮವಾರಪೇಟೆ - ಮಡಿಕೇರಿ ರಾಜ್ಯ ಹೆದ್ದಾರಿ ಬದಿ ಪ್ರಗತಿಯಲ್ಲಿದ್ದ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಯಂತ್ರೋಪಕರಣಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಗುತ್ತಿಗೆದಾರ ಆರ್.ಸಿ. ಗಣೇಶ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಸ್ಥಳಕ್ಕೆ ತೆರಳಿದ ಸಂಘದ ಪದಾಧಿಕಾರಿಗಳು, ತಮ್ಮ ಪ್ರತಿಭಟನೆಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖಾ ಅಭಿಯಂತರ ಪೀಟರ್ ಅವರೊಂದಿಗೆ ಮಾತುಕತೆ ನಡೆಸಿದ ಗುತ್ತಿಗೆದಾರರು, ಮುಂದಿನ ದಿನಗಳಲ್ಲಿ ಇಲಾಖೆಯ ಯಾವದೇ ಕಾಮಗಾರಿಯನ್ನು ನಿರ್ವಹಿಸುವದಿಲ್ಲ ಎಂದರು. ಈಗಾಗಲೇ ಟೆಂಡರ್ ಪಡೆದಿರುವ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಅಭಿಯಂತರರು ತಿಳಿಸಿದ ಸಂದರ್ಭ, ಘೋಷಣೆ ಯಾಗಿರುವ ಅನುದಾನವನ್ನು ಬಿಡುಗಡೆಗೊಳಿಸುವವರೆಗೂ ಕೆಲಸ ಮಾಡುವದಿಲ್ಲ. ನಮ್ಮ ಬೇಡಿಕೆ ಸರ್ಕಾರಕ್ಕೆ ತಲಪಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ ಎಂದು ಒತ್ತಾಯಿಸಿದರು.
ಅನೇಕ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಇದೀಗ ನಮ್ಮ ಬಳಿ ಹಣವಿಲ್ಲದಂತಾಗಿದೆ. ಕಳೆದ ಒಂದೂವರೆ ವರ್ಷದಿಂದ ಬಡ್ಡಿ ಕಟ್ಟಿ ಸಾಕಾಗಿದೆ. ಮುಂದಿನ ದಿನಗಳಲ್ಲೂ ಸಹ ಯಾವದೇ ಟೆಂಡರ್‍ಗಳನ್ನು ಹಾಕುವದಿಲ್ಲ. ಹೊರ ಭಾಗದವರು ಟೆಂಡರ್ ಹಾಕಿದರೂ ಸಹ ಅವರ ಮನವೊಲಿಸುತ್ತೇವೆ. ನೀವುಗಳು ಮಾತ್ರ ನಮ್ಮ ಮೇಲೆ ಒತ್ತಡ ಹಾಕಬೇಡಿ ಎಂದು ಗುತ್ತಿಗೆದಾರರು ಅಭಿಯಂತರ ರಿಗೆ ಮನವಿ ಮಾಡಿದರು.
ಈ ಮಧ್ಯೆ ಸ್ಥಳೀಯ ಕೆಲ ವ್ಯಕ್ತಿಗಳು ಕಾಮಗಾರಿ ಸಮರ್ಪಕ ವಾಗಿಲ್ಲ ಎಂದು ಸುಳ್ಳು ದೂರುಗಳನ್ನು ಸಲ್ಲಿಸಿದ್ದಾರೆ. ಕಳಪೆಯಾಗಿರುವ ಕಾಮಗಾರಿಗಳ ಬಗ್ಗೆ ದೂರು ನೀಡಿದರೆ ನಮ್ಮ ಅಭ್ಯಂತರವಿಲ್ಲ, ಆದರೆ ವಿಶೇಷ ಪ್ಯಾಕೇಜ್ ಅನುದಾನದ ಕಾಮಗಾರಿಗಳೆಲ್ಲವೂ ಕಳಪೆಯಾಗಿದೆ ಎಂದು ಸುಳ್ಳು ದೂರು ಸಲ್ಲಿಸಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯ ಗ್ರಾ.ಪಂ., ತಾ.ಪಂ., ಜಿ.ಪಂ., ಶಾಸಕರು ವೀಕ್ಷಣೆ ಮಾಡುತ್ತಾರೆ. ಅಭಿಯಂತರರು ಕಾಮಗಾರಿಯ ಗುಣಮಟ್ಟ ಪರಿಶೀಲಿಸಿಯೇ ವರದಿ ನೀಡುತ್ತಾರೆ. ಹೀಗಿದ್ದು, ಅನಗತ್ಯ ವಿಳಂಬಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಸಣ್ಣೇಗೌಡ, 2016 ಮತ್ತು 17ನೇ ಸಾಲಿನಲ್ಲಿ ಸೋಮವಾರಪೇಟೆ ಉಪ ವಿಭಾಗಕ್ಕೆ ರೂ. 16 ಕೋಟಿ ಹಣ ಘೋಷಣೆಯಾಗಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕೇವಲ 3 ಕೋಟಿ ಹಣ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ 13 ಕೋಟಿ ಹಣ ಬಿಡುಗಡೆಗೆ ಬಾಕಿ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವುಗಳು ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದರು.
ಈಗಾಗಲೇ ಅತಿವೃಷ್ಟಿಯಿಂದ ತಾಲೂಕಿನ ಹಲವಷ್ಟು ರಸ್ತೆಗಳು, ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿವೆ. ಜನತೆ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ 100 ಕೋಟಿ ವಿಶೇಷ ಅನುದಾನ ಒದಗಿಸುವ ಭರವಸೆ ನೀಡಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಇದರೊಂದಿಗೆ ಕಳೆದ ಸಾಲಿನ ಪ್ಯಾಕೇಜ್ ಹಣವೂ ಬಂದಿಲ್ಲ. ಗುತ್ತಿಗೆದಾರರು ಸಾಲಗಾರರಾಗಿದ್ದಾರೆ. ಆದರೂ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಹಣ ಬಿಡುಗಡೆಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತಾ. 6 ರಂದು (ಇಂದು) ನಡೆಯುವ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲೂ ಸಹ ಭಾಗವಹಿಸುವದಿಲ್ಲ. ಮುಂದಿನ 10 ದಿನಗಳ ಒಳಗೆ ಅನುದಾನ ಬಿಡುಗಡೆಯಾಗದೇ ಇದ್ದಲ್ಲಿ, ಸೋಮವಾರಪೇಟೆ ಮತ್ತು ಮಡಿಕೇರಿಯಲ್ಲಿರುವ ಇಲಾಖಾ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಸಣ್ಣೇಗೌಡ ಎಚ್ಚರಿಸಿದರು.
ಈ ಸಂದರ್ಭ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಆರ್.ಸಿ. ವಿಜಯ, ಪುರುಷೋತ್ತಮ್ ರೈ, ಲಾರೆನ್ಸ್, ಆಲಿಪ್, ಮುರುಳಿ, ಅಣ್ಣಪ್ಪ, ಸಂತೋಷ್, ದೊರೆಸ್ವಾಮಿ, ಪವನ್‍ಕುಮಾರ್, ಪರಮಶಿವ, ವಿನೋದ್, ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾವು ಕಾರಣರಲ್ಲ: ಪತ್ರಿಕಾಗೋಷ್ಠಿಯಲ್ಲೂ ಇದೇ ವಿಷಯ ಪ್ರಸ್ತಾಪಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ರಸ್ತೆಗಳು ಹಾಳಾಗಿವೆ. ಅಲ್ಲದೆ ಶಿರಾಡಿ ರಸ್ತೆ ಬಂದ್ ಆದ ಸಂದರ್ಭ ಭಾರಿ ವಾಹನಗಳು ಕೊಡಗು ಜಿಲ್ಲೆಯ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಅನೇಕ ಕಡೆ ರಸ್ತೆಗಳು ಹಾಳಾಗಿವೆ. ಇದಕ್ಕೂ ಗುತ್ತಿಗೆದಾರರಿಗೂ ಸಂಬಂಧವಿಲ್ಲ ಎಂದರು.
ಶಾಸಕ ರಂಜನ್ ಪ್ರತಿಕ್ರಿಯೆ: ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರು ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಸಂಬಂಧ ನಿರ್ಧಾರ ಕೈಗೊಂಡಿರುವದು ತನ್ನ ಗಮನಕ್ಕೆ ಬಂದಿದೆ. ಅವರ ಮನವಿಯನ್ನು ಸಂಪೂರ್ಣ ಪರಾಮರ್ಶಿಸಿ, ಆಗಿರುವ ವಿಳಂಬಕ್ಕೆ ಕಾರಣ ತಿಳಿದುಕೊಂಡು ಹಣ ಬಿಡುಗಡೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವದು ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದಾರೆ.