ಸೋಮವಾರಪೇಟೆ, ಆ.4: ಈ ಹಿಂದಿನ ರಾಜ್ಯ ಸರ್ಕಾರ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡಿದೆ. ಡಿಸಿಸಿ ಮತ್ತು ವಿಎಸ್‍ಎಸ್‍ಎನ್ ಬ್ಯಾಂಕ್‍ಗಳು ರೈತರ 149 ಕೋಟಿ ಸಾಲವನ್ನು ಮನ್ನಾ ಮಾಡಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗದೇ ಇರುವದರಿಂದ ಬ್ಯಾಂಕ್‍ಗಳು ನಷ್ಟದ ಹಾದಿಯಲ್ಲಿವೆ. ಸಾಲಮನ್ನಾ ಹೆಸರಿನಲ್ಲಿ ಈಗಿನ ಸರ್ಕಾರ ಬೂಟಾಟಿಕೆ ನಡೆಸುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದರು.ಇದರೊಂದಿಗೆ ಈಗಿನ ಸರ್ಕಾರ ರೈತರ 2 ಲಕ್ಷವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡುವದಾಗಿ ಘೋಷಿಸಿದ್ದು, ಇದಕ್ಕಾಗಿ 14 ಅಂಶಗಳನ್ನು ಗೊತ್ತು ಮಾಡಿದೆ. ಇದರಲ್ಲಿ ಬಹುತೇಕ ಅಂಶಗಳು ಅವೈಜ್ಞಾನಿಕವಾಗಿವೆ. ಈ ನಿಬಂಧನೆಗಳನ್ನು ಅನುಷ್ಠಾನ ಗೊಳಿಸಿದರೆ ಸಾವಿರಾರು ರೈತರು ಸಾಲಮನ್ನಾ ಯೋಜನೆಯಿಂದ ವಂಚಿತರಾಗಲಿದ್ದಾರೆ. ಸರ್ಕಾರ ಈ ಕೈಯಿಂದ ಕೊಟ್ಟು ಆ ಕೈಯಿಂದ ಕಿತ್ತುಕೊಳ್ಳುವ ತಂತ್ರ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಗೋಷ್ಠಿಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ರಂಜನ್, ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರೈತರ 50 ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡುವದಾಗಿ ಘೋಷಿಸಿದ್ದು, ಅದರಂತೆ ಡಿಸಿಸಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು 149 ಕೋಟಿ ಹಣವನ್ನು ರೈತರ ಸಾಲಮನ್ನಾಕ್ಕೆ ವಿನಿಯೋಗಿಸಿವೆ. ಆದರೆ ಸರ್ಕಾರದಿಂದ 3.50 ಕೋಟಿ ಮಾತ್ರ ಬ್ಯಾಂಕ್‍ಗಳಿಗೆ ಬಂದಿದೆ ಎಂದರು.

ಇದರಿಂದಾಗಿ ಪ್ರತಿ ತಿಂಗಳು ಡಿಸಿಸಿ ಬ್ಯಾಂಕ್‍ಗೆ 50 ಲಕ್ಷ ನಷ್ಟ ಸಂಭವಿಸುತ್ತಿದೆ. ತಕ್ಷಣ ಸರ್ಕಾರ ಹಳೆ ಸಾಲಮನ್ನಾ ಯೋಜನೆಯ ಹಣವನ್ನು ಡಿಸಿಸಿ ಬ್ಯಾಂಕ್‍ಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಈಗಿನ ಮೈತ್ರಿ ಸರ್ಕಾರ 2 ಲಕ್ಷದವರೆಗಿನ

(ಮೊದಲ ಪುಟದಿಂದ) ಸುಸ್ತಿಸಾಲ ಮನ್ನಾ ಮಾಡುವದಾಗಿ ಘೋಷಿಸಿದ್ದು, ಇದಕ್ಕಾಗಿ 14 ಮಾನದಂಡ ಅಳವಡಿಸಿದೆ. ರೈತರಿಗೆ ಲಾಭ ಒದಗಿಸದ ಇಂತಹ ಮಾನದಂಡಗಳನ್ನು ತಕ್ಷಣ ತೆಗೆದುಹಾಕಿ ಎಲ್ಲಾ ರೈತರಿಗೂ ಅನ್ವಯವಾಗುವಂತೆ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ ರಂಜನ್, ಸಾಲಮನ್ನಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಬಳಿ ನಿರ್ದಿಷ್ಟ ಅಂಕಿಅಂಶಗಳು, ಸಂಪನ್ಮೂಲ ಕ್ರೋಢೀಕರಣದ ಮಾರ್ಗಗಳ ಬಗ್ಗೆ ಮಾಹಿತಿಯೇ ಇಲ್ಲ. ಇದೂ ಸಹ ಬೂಟಾಟಿಕೆಯ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಿಸಿದರು.

ಸಾಲಮನ್ನಾ ಮಾಡುವದಿದ್ದರೆ ರೈತರಿಗೆ ಯಾವದೇ ಷರತ್ತುಗಳನ್ನು ವಿಧಿಸಬಾರದು. ಕಾಫಿ, ಏಲಕ್ಕಿ, ಕರಿಮೆಣಸು ಬೆಳಗಾರರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ ರಂಜನ್, ಈ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿಯನ್ನೇ ನೇರವಾಗಿ ಆಗ್ರಹಿಸುತ್ತೇವೆ ಎಂದರು.

ಕಳೆದ ಕೆಲ ದಿನಗಳ ಹಿಂದೆ ಕೊಡಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು 100 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ನಿನ್ನೆ ದಿನ ಸಚಿವರು 50 ಕೋಟಿ ಬಿಡುಗಡೆಯಾಗಿರುವದಾಗಿ ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಖಾತೆಗೆ ಹಣವೇ ಬಂದಿಲ್ಲ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಅತೀವೃಷ್ಟಿಗೆ ಭಾರೀ ಹಾನಿಯಾಗಿದ್ದರೂ ಕಾವೇರಿ ನದಿ ತುಂಬಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಒದಗಿಸಿದೆ. ಹಲವಷ್ಟು ಬಂದ್‍ಗಳನ್ನು ತಪ್ಪಿಸಿದೆ. ಈ ಹಿನ್ನೆಲೆ ಕೊಡಗಿಗೆ ತಕ್ಷಣ ವಿಶೇಷ ಪ್ಯಾಕೇಜ್ ಹಣ ಒದಗಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಸಾಲಮನ್ನಾ ಅಸಮರ್ಪಕವಾಗಿರುವ ಬಗ್ಗೆ ಈಗಾಗಲೇ ಬೆಳೆಗಾರರ ವರ್ಗದಲ್ಲಿ ಅಸಮಾಧಾನ ವ್ಯಕ್ತಗೊಳ್ಳುತ್ತಿದೆ. ಬೆಳೆಗಾರರು ಹೋರಾಟದ ಹಾದಿ ಹಿಡಿಯುವ ಮುನ್ನ ಸರ್ಕಾರ ಎಚ್ಚೆತ್ತುಕ್ಕೊಳ್ಳಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಮೈತ್ರಿ ಸರ್ಕಾರ ಇದೆಯೋ ಇಲ್ಲವೋ ಎಂಬ ಬಗ್ಗೆ ಸಂಶಯ ಮೂಡುತ್ತಿದೆ. ಆಡಳಿತ ಯಂತ್ರ ಹಳಿ ತಪ್ಪಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಕೈಗೊಂಡ ರಸ್ತೆಗಳನ್ನು ಉಳಿಸಿಕೊಳ್ಳಲೂ ಸಹ ಸರ್ಕಾರ ವಿಫಲವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ರೈತ ಪರ ಎಂದು ಹೇಳಿಕೊಂಡು ಮುಖ್ಯಮಂತ್ರಿ ಹುದ್ದೆಗೆ ಏರಿದವರು ರೈತಪರ ಕಾಳಜಿ ಮರೆತಿದ್ದಾರೆ. ಅವೈಜ್ಞಾನಿಕ ಸಾಲಮನ್ನಾ ಘೋಷಣೆಯಿಂದಾಗಿ ಈಗಾಗಲೇ ರಾಜ್ಯದಲ್ಲಿ 5 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು. ಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಶ್ರೀನಿವಾಸ್ ಉಪಸ್ಥಿತರಿದ್ದರು.

ಹಕ್ಕುಚ್ಯುತಿ ಮಂಡನೆಗೆ ಚಿಂತನೆ: ಜಿಲ್ಲೆಯಲ್ಲಿ ಶಾಸಕರು ಮತ್ತು ಎಂಎಲ್‍ಸಿಗಳ ಗಮನಕ್ಕೆ ತಾರದೇ ಹಲವಷ್ಟು ಅಧಿಕಾರಿಗಳನ್ನು ವರ್ಗ ಮಾಡುವ ಯತ್ನ ನಡೆಯುತ್ತಿದೆ. ಮುಖಂಡರೋರ್ವರು ತಮ್ಮ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡು ತಮ್ಮ ಮೂಗಿನ ನೇರಕ್ಕೆ ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಾರದೇ ಕೆಲ ಬೆಳವಣಿಗೆಗಳು ನಡೆಯುತ್ತಿವೆ. ಹಾರಂಗಿಯ ವ್ಯಕ್ತಿಯೋರ್ವ ಇವರ ಆಪ್ತ ಸಹಾಯಕ ಎಂದುಕೊಂಡು ಮಾಜೀ ಜನಪ್ರತಿನಿಧಿಯ ಲೆಟರ್‍ಹೆಡ್ ಇಟ್ಟುಕೊಂಡು ತಿರುಗುತ್ತಿದ್ದಾನೆ. ಈ ಹಿಂದೆ ಕಳ್ಳತನ ಕೇಸ್‍ನಲ್ಲಿ ಜೈಲಿನಲ್ಲಿದ್ದ ವ್ಯಕ್ತಿ ಇದೀಗ, ಮುಖಂಡರ ಜತೆ ಸೇರಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾನೆ. ಅಧಿಕಾರಿಗಳನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾನೆ. ಈತನ ಭಾವಚಿತ್ರ ಸಹಿತ ವಿಧಾನಸೌಧದ ಅಧಿಕಾರಿಗಳಿಗೆ ದೂರು ನೀಡಲಾಗುವದು. ಇದರೊಂದಿಗೆ ಶಾಸಕರನ್ನು ಕತ್ತಲಲ್ಲಿಟ್ಟು ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಶಾಸಕರ ಶಾಸನಬದ್ಧ ಅಧಿಕಾರ ಚಲಾಯಿಸಲು ಮುಂದಾದರೆ ಅಂತಹ ಮುಖಂಡರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ರಂಜನ್ ಹೇಳಿದರು.

ಮೈತ್ರಿಯಿಂದ ಬಿಜೆಪಿಗೆ ಲಾಭ: ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಅಧಿಕ ಲಾಭ. ಈ ಬಾರಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಒಂದೇ ಪಕ್ಷಕ್ಕೆ ಅನುಕೂಲವಾಗುವ ಹಾಗೆ ಮೀಸಲಾತಿ ತಂದಿದ್ದಾರೆ. ಇದರಿಂದ ಮತ್ತೊಂದು ಪಕ್ಷದಲ್ಲಿ ಅಸಮಾಧಾನವಿದೆ. ಈಗಾಗಲೇ ಸೋಮವಾರಪೇಟೆ ಪ.ಪಂ.ನಲ್ಲಿ ಹಲವಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, 1996ರಿಂದಲೂ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಸರ್ಕಾರವಿದ್ದಾಗ ಪ್ರತಿ ವರ್ಷ ನಗರೋತ್ಥಾನ ಯೋಜನೆಯಡಿ 5 ಕೋಟಿ ವಿಶೇಷ ಅನುದಾನ ನೀಡಿದ್ದೇವೆ. ಕಳೆದ ಸರ್ಕಾರ 5 ವರ್ಷಕ್ಕೆ 5 ಕೋಟಿ ನೀಡಿದೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಾಣಿಜ್ಯ ಸಂಕೀರ್ಣಗಳಿರುವ ಪ.ಪಂ. ಆಗಿ ಸೋಮವಾರಪೇಟೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಕ್ರಮ ವಹಿಸಲಾಗುವದು ಎಂದು ರಂಜನ್ ನುಡಿದರು.