ಮಡಿಕೇರಿ, ಆ. 5: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕ ಮತ್ತು ಕಾರ್ಯದರ್ಶಿಗಳಿಗೆ ಸಹಕಾರಿ ಚುನಾವಣೆ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತಾದ ಶಿಕ್ಷಣ ಕಾರ್ಯ ಕ್ರಮವನ್ನು ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಕೂಡಿಗೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳರವರು, ಸಹಕಾರ ಸಂಘಗಳ ನಿರ್ದೇಶಕರುಗಳ ಜವಾಬ್ದಾರಿಯನ್ನು ನಿರ್ವಹಿಸುವದು ಬಹಳ ಮುಖ್ಯ. ಇದನ್ನು ಇಂತಹ ತರಬೇತಿಗಳ ಮುಖಾಂತರ ಗಟ್ಟಿಗೊಳಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿದ್ದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ. ಅರುಣ್ ಕುಮಾರ್ ಮಾತನಾಡಿ, ಈ ವರ್ಷ ಹವಾಮಾನ ಉತ್ತಮವಾಗಿ ರುವದರಿಂದ ಹಾಲು ಉತ್ಪಾದನೆ ಬಹಳಷ್ಟು ಹೆಚ್ಚು ಸಂಗ್ರಹಣೆ ಯಾಗುತ್ತಿದೆ. ಕಳೆದ ವರ್ಷ ಇದೆ ಸಮಯಕ್ಕೆ 6 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗಿದ್ದರೆ, ಈ ವರ್ಷ 10 ಲಕ್ಷಕ್ಕೂ ಮೀರಿ ಸಂಗ್ರಹಣೆಯಾಗುತ್ತಿದೆ. ಇದರಲ್ಲಿ 1.50 ಲಕ್ಷ ಮಾತ್ರ ಮಾರಾಟವಾಗುತ್ತಿದೆ. ಉಳಿದ 8.50 ಲಕ್ಷ ಲೀಟರ್ ಹಾಲು ಬೇರೆ ಮಾರ್ಗೋಪಾಯದಿಂದ ಮಾರಾಟ ಮಾಡಲು ಪ್ರಯತ್ನ ಮಾಡಬೇಕಾಗಿದೆ. ನಮ್ಮ ಭಾಗದ ಹಾಲಿನ ಪುಡಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇದ್ದು, ಹಾಲಿನ ಗುಣಮಟ್ಟ ಕಾಪಾಡಿಕೊಳ್ಳ ಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎ.ಕೆ. ಮನು ಮುತ್ತಪ್ಪ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನಬಾರ್ಡ್ ವತಿಯಿಂದ ವಿಶೇಷ ಕಾರ್ಯ ಕ್ರಮವನ್ನು ಹಮ್ಮಿಕೊಂಡು ಪ್ರೋತ್ಸಾಹ ನೀಡುತ್ತಿದೆ. ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯಲ್ಲಿ ಭಾರತ ಎರಡನೇ ದೊಡ್ಡ ರಾಷ್ಟ್ರವಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ 15 ಸಾವಿರ ಲೀಟರ್ ಹಾಲು ಸಂಗ್ರಹಣೆ ಯಾಗುತ್ತಿದೆ. 50 ಸಾವಿರ ಲೀಟರ್ ಮಾರಾಟವಾಗುತ್ತಿದೆ. ಇಡೀ ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಈ ಕೊರತೆ ಕಾಣುತ್ತಿದೆ ಎಂದರು. ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ, ಸಂಘಗಳ ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ, ಅಧ್ಯಕ್ಷರ ಮತ್ತು ನಿರ್ದೇಶಕರ ಕರ್ತವ್ಯ, ಜವಾಬ್ದಾರಿಗಳು, ದೈನಂದಿನ ಲೆಕ್ಕಪತ್ರಗಳ ತಪಾಸಣೆ, ಆಡಳಿತ ಮಂಡಳಿ ಸಭೆ, ವಾರ್ಷಿಕ ಮಹಾಸಭೆ ಇನ್ನಿತರ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಸೋಮವಾರ ಪೇಟೆ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ. ಮೋಹನ್, ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಸುವ ಕುರಿತು ಸಮಗ್ರ ಮಾಹಿತಿ ನೀಡಿದರು. ಮತ್ತೋರ್ವ ಉಪನ್ಯಾಸಕ ರಾಗಿ ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಹೆಚ್.ಎ. ಪ್ರಕಾಶ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಎಸ್.ಪಿ. ನಿಂಗಪ್ಪ, ಎನ್.ಎ. ರವಿಬಸಪ್ಪ, ಕನ್ನಂಡ ಸಂಪತ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿ ಕುಮಾರ್ ಉಪಸ್ಥಿತರಿದ್ದರು. ಕಾರ್ಯ ಕ್ರಮದ ಸ್ವಾಗತ ಹಾಗೂ ನಿರೂಪಣೆ ಯನ್ನು ಯೂನಿಯನ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನೆರವೇರಿ ಸಿದರು. ಪ್ರಾರ್ಥನೆ ಯನ್ನು ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ನಡೆಸಿದರು.