ಮಡಿಕೇರಿ, ಆ. 5: ಕೃಷಿ ಪ್ರಧಾನ ಜಿಲ್ಲೆಯಾಗಿ ಮಳೆಗಾಲಕ್ಕೆ ಕೊಡಗು ಜಿಲ್ಲೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಮಳೆಗಾಲ ಈ ಹಿಂದಿನ ತೀವ್ರತೆಯನ್ನು ಕಂಡಿರಲಿಲ್ಲ. ವಾತಾವರಣದಲ್ಲಿ ಹಲವಷ್ಟು ಬದಲಾವಣೆಗಳು ಕಂಡು ಬರುತ್ತಿದ್ದವು. ಆದರೆ ಪ್ರಸಕ್ತ ವರ್ಷದ ಮಳೆಗಾಲ ಆರಂಭದಿಂದಲೇ ಅಬ್ಬರಿಸಿದ್ದು, ಕೊಡಗಿನಲ್ಲೇ ಹುಟ್ಟಿ ಬೆಳೆದವರಿಗೂ ಸಾಕಪ್ಪಾ - ಸಾಕು ಎಂಬಂತಹ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಇಲ್ಲಿನ ಜನತೆಯದ್ದು ಒಂದು ರೀತಿಯ ಅನುಭವವಾದರೆ ಈ ಪರಿಸ್ಥಿತಿಯನ್ನು ನಿಭಾಯಿಸುವವರು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಅಧಿಕಾರಿಗಳೆಲ್ಲ ಕೊಡಗಿನವರಲ್ಲ. (ಮೊದಲ ಪುಟದಿಂದ) ಜಿಲ್ಲಾಧಿಕಾರಿಗಳಿಂದ ಹಿಡಿದು ಇನ್ನಿತರ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಅನಿವಾರ್ಯತೆಯ ನಡುವೆ 2018ರ ಕೊಡಗಿನ ಮಳೆಗಾಲದ ವಿಶಿಷ್ಟವಾದ ಅನುಭವಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಅಧಿಕಾರಿಗಳ ಅನುಭವ ಎದುರಿಸಿದ ಪರಿಸ್ಥಿತಿಯ ಚಿತ್ರಣದ ತುಣುಕುಗಳನ್ನು ‘ಶಕ್ತಿ’ ಅವರ ಮಾತುಗಳಲ್ಲೇ ಇಲ್ಲಿ ಸಂಕ್ಷಿಪ್ತವಾಗಿ ತೆರೆದಿಟ್ಟಿದೆ.

ಅನುಭವ ಹೆಚ್ಚಿಸಿದೆ - ಶ್ರೀ ವಿದ್ಯಾ : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಸುರಿದ, ಸುರಿಯುತ್ತಿರುವ ಎಡೆಬಿಡದ ಮಳೆ, ಅಲ್ಲಲ್ಲಿ ಕಂಡು ಬಂದ ಭೂಕುಸಿತ, ರಸ್ತೆ ಸಂಪರ್ಕ ಕಡಿತ, ವಿದ್ಯುತ್ ವ್ಯತ್ಯಯದಂತಹ ಪರಿಸ್ಥಿತಿಗಳು ತಮ್ಮ ವೃತ್ತಿ ಜೀವನದ ಅನುಭವವನ್ನು ಮತ್ತಷ್ಟು ಹೆಚ್ಚಿಸಿದೆ. ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ಸಚಿವರುಗಳು, ಜಿಲ್ಲೆಯ ಜನಪ್ರತಿನಿಧಿಗ ಳೊಂದಿಗೆ ಅವರ ಸಲಹೆಯನ್ನೂ ಪಡೆದು ಜನತೆಯ ಸಂಕಷ್ಟಕ್ಕೆ ಸಾಧ್ಯವಾದಷ್ಟು ಸ್ಪಂದಿಸಿರುವ ತೃಪ್ತಿ ಇದೆ. ಮಳೆಯಿಂದಾಗಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಜನತೆಯ ಮನೋಸ್ಥೈರ್ಯ ಶ್ಲಾಘನೀಯ: ಸಿಇಓ

ಕೊಡಗಿನಲ್ಲಿ ಕಂಡು ಬಂದ ಪ್ರಾಕೃತಿಕ ವಿಕೋಪವನ್ನು ಇಲ್ಲಿನ ಜನರು ಸಮರ್ಥವಾಗಿ ಎದುರಿಸಿ ಮನೋಸ್ಥೈರ್ಯ ತೋರಿದ್ದಾರೆ. ಯಾವದೇ ಪರಿಸ್ಥಿತಿಗೂ ಒಗ್ಗಿಕೊಂಡು ಎಲ್ಲವನ್ನೂ ನಿಭಾಯಿಸಿದ್ದಾರೆ. ಹಲವಾರು ಕಷ್ಟ - ನಷ್ಟಗಳು ಉಂಟಾಗಿದ್ದರೂ ಬೇಸಿಗೆಯಲ್ಲಿ ಎದುರಿಸುವ ನೀರಿನ ಸಮಸ್ಯೆ ಬಗೆಹರಿಯಬಹುದು ಎನ್ನಬಹುದು. ಮಳೆಗಾಲದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಲು ಒಂದು ರೀತಿಯ ವಿಶಿಷ್ಟ ಸ್ಪರ್ಧಾತ್ಮಕ ಅನುಭವವಾಗಿದೆ. ಅನೇಕ ಕಡೆಗಳಲ್ಲಿ ಮಳೆ ಇಲ್ಲದೆ ಜನತೆ ಕುಡಿಯುವ ನೀರಿಗೆ ಬವಣೆ ಪಡುತ್ತಾರೆ. ಆದರೆ ಜಿಲ್ಲೆಯಲ್ಲಿ ಇಂತಹ ಸನ್ನಿವೇಶ ಇಲ್ಲ.

ಅನುಭವವಿತ್ತು: ಪೊಲೀಸ್ ವರಿಷ್ಠಾಧಿಕಾರಿ

ಪಶ್ಚಿಮಘಟ್ಟ ಶ್ರೇಣಿಯ ಮಳೆಯ ತೀವ್ರತೆಯ ಅನುಭವ ತಮಗಿತ್ತು. ಬೆಳಗಾವಿಯಂತಹ ಜಿಲ್ಲೆಯು ಪಶ್ಚಿಮಘಟ್ಟ ಶ್ರೇಣಿಯಡಿ ಬರಲಿದ್ದು, ಕೊಡಗಿನಂತೆಯೇ ಅಲ್ಲಿಯೂ ಒಮ್ಮೊಮ್ಮೆ ತೀವ್ರ ಮಳೆ - ಗಾಳಿ- ಚಳಿ ಇರುತ್ತದೆ. ಇದರ ನಡುವೆಯೂ ಕರ್ತವ್ಯ ನಿರ್ವಹಣೆ ಖುಷಿ ಕೊಟ್ಟಿದೆ.

‘ಹಾರಿಬಲ್’ ಎಕ್ಸ್‍ಪಿಯರೆನ್ಸ್ - ಸೋಮಶೇಖರ್: ಸೆಸ್ಕ್ ಕಾರ್ಯಪಾಲಕ ಅಭಿಯಂತರ

ಹಿಂದಿನ ವರ್ಷಗಳ ಮಳೆಗಾಲಕ್ಕೆ ಹೋಲಿಸಿದಲ್ಲಿ ಈ ಬಾರಿ ಅಧಿಕ ಸಮಸ್ಯೆಯೊಂದಿಗೆ ಅಪಾರ ಹಾನಿಯೂ ಉಂಟಾಗಿದ್ದು, ಇದು ‘ಹಾರಿಬಲ್ ಎಕ್ಸ್‍ಪಿರೆನ್ಸ್’ ಎಂದು ನುಡಿದರು. ಕಳೆದ ವರ್ಷ 1800 ರಿಂದ 1900 ಕಂಬಗಳು ಹಾನಿಗೀಡಾಗಿತ್ತು. ಆದರೆ ಈ ಬಾರಿ 2850 ಕಂಬಹಾನಿ, 220 ಟ್ರಾನ್ಸ್‍ಫಾರ್ಮರ್, 25 ಕಿ.ಮೀ. ನಷ್ಟು ತಂತಿ ಹಾನಿಗೀಡಾಗಿವೆ. ವ್ಯವಸ್ಥೆ ಸರಿಪಡಿಸಲು ಇಲಾಖೆ ಸಾಕಷ್ಟು ಶ್ರಮ ಪಡುವಂತಾಗಿತ್ತು.

ಇಲ್ಲಿ ಮಳೆಯೂ ಬದುಕಿನ ಒಂದು ಭಾಗ - ಮಂಜುಳ : ಡಿಡಿಪಿಐ

ಕೊಡಗಿನ ಮಳೆಗಾಲ, ಅದರಲ್ಲೂ ಮಡಿಕೇರಿಯ ಮಳೆ ಹೊಸತೊಂದು ವಿಶಿಷ್ಟ ಅನುಭವವಾದಂತಿತ್ತು. ಬಯಲು ಸೀಮೆಯಲ್ಲಿ ಮಳೆ ಸಣ್ಣ ಪ್ರಮಾಣದಲ್ಲಿ ಬಂದರೂ ಆತಂಕ ಪಡುತ್ತಾರೆ. ಆದರೆ, ಇಲ್ಲಿ ಶಾಲೆಗಳಿಗೆ ಸುದೀರ್ಘವಾಗಿ ರಜೆ ಘೋಷಿಸುವ ಪರಿಸ್ಥಿತಿ ಇದ್ದರೂ ಇಲ್ಲಿನ ಜನರು, ಮಕ್ಕಳು ಮಳೆಗಾಲವನ್ನೂ ತಮ್ಮ ಬದುಕಿನ ಒಂದು ಭಾಗ ಎಂದು ಪರಿಗಣಿಸುವದು ಅರಿವಾಗಿದೆ.

ಕೊಡಗು ಈಸ್ ಡಿಫರೆಂಟ್ - ಶಿವಕುಮಾರ್:ಕೃಷಿ ಇಲಾಖೆ ಉಪನಿರ್ದೇಶಕ

ಕೊಡಗಿನ ಮಳೆಗಾಲ ವಿಭಿನ್ನವಾಗಿದ್ದು, ಬೇರೆಡೆಗೆ ಹೋಲಿಸಿದರೆ ಇಲ್ಲಿನ ಮಳೆಯೇ ಪ್ರತ್ಯೇಕ. ತಾವು ಜಿಲ್ಲೆಗೆ ಹೊಸದಾಗಿ ನಿಯೋಜನೆಗೊಂಡಿದ್ದು, ಬಂದ ಬಳಿಕ ನಿತ್ಯವೂ ಮಳೆಯನ್ನೇ ಕಂಡಿದ್ದೇನೆ. ಉತ್ತರ ಕರ್ನಾಟಕದವನಾದರೂ ಈ ಹಿಂದೆ ಸುಮಾರು ವರ್ಷ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಮೈಸೂರಿಗೆ ಈ ರೀತಿಯಲ್ಲಿ ಮಳೆಯಾಗದು. ಜನ ಜೀವನವೂ ಅಸ್ತವ್ಯಸ್ತವಾಗುವದಿಲ್ಲ. ಒಟ್ಟಿನಲ್ಲಿ ಕೊಡಗು ಈಸ್ ಡಿಫರೆಂಟ್.

ಕಂಡರಿಯದ ಮಳೆ - ಶುಭಾ: ನಗರಸಭಾ ಆಯುಕ್ತೆ

ಪ್ರಸಕ್ತ ವರ್ಷ ಸುರಿದ ಮಳೆ ಇತ್ತೀಚಿನ ವರ್ಷಗಳಲ್ಲಿ ಹಿರಿಯರೇ ಹೇಳುವಂತೆ ಕಂಡರಿಯದ್ದು. ಇಲ್ಲಿನ ಜನತೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸಮರ್ಥರಿದ್ದಾರೆ. ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳನ್ನು ಮೊದಲೇ ಅರಿತು ಆದ್ಯತೆ ಮೇಲೆ ಕೆಲಸ ನಿರ್ವಹಿಸಿದಲ್ಲಿ ಮಳೆಗಾಲದ ಸಂದರ್ಭದ ಅನಾಹುತಗಳನ್ನು ತಡೆಗಟ್ಟಬಹುದು.ಇದೇ ಮೊದಲ ಅನುಭವ - ಲಿಂಗರಾಜು : ಅರಣ್ಯ ಸಂರಕ್ಷಣಾಧಿಕಾರಿ

ಮಳೆಗಾಲ ಹಿಂದಿನ ವರ್ಷಗಳಲ್ಲಿ ಈ ರೀತಿಯಾಗಿರುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದರು. ತಮಗೆ ಇದಂತೂ ಹೊಸ ಅದ್ಭುತದ ಅನುಭವ. ಬಯಲು ಸೀಮೆಗೂ ಇಲ್ಲಿಗೂ ವ್ಯತ್ಯಾಸವಿದೆ. ಮಳೆಗಾಲದಲ್ಲಿ ಓಡಾಟ ಕರ್ತವ್ಯ ನಿರ್ವಹಣೆ ಕಷ್ಟಕರವಾಗಿತ್ತು.

ಸಮರ್ಥ ಕೆಲಸ ನಿರ್ವಹಣೆ : ಪಳಂಗಪ್ಪ : ಅಗ್ನಿಶಾಮಕ ದಳದ ಅಧಿಕಾರಿ

ಪ್ರಸಕ್ತ ವರ್ಷದ ಮಳೆಗಾಲ ಎಲ್ಲರಿಗೂ ವಿಶಿಷ್ಟ ಅನುಭವ. ಕಳೆದ 15-20 ವರ್ಷಗಳಲ್ಲಿ ಇದು ಹೆಚ್ಚಿನ ಮಳೆಯಾದ ವರ್ಷವಾಗಿದೆ. ಮರ ಬೀಳುವದು, ಬರೆ ಕುಸಿತ, ಭೂಕುಸಿತ, ಪ್ರವಾಸ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ತೃಪ್ತಿ ಇದೆ.