ಸೋಮವಾರಪೇಟೆ, ಆ.5: ಕಳೆದ ಅನೇಕ ವರ್ಷಗಳಿಂದ ಹೂಳುತುಂಬಿದ್ದ ಆನೆಕೆರೆಗೆ ಪ್ರಸಕ್ತ ವರ್ಷ ದಾನಿ ಹರಪಳ್ಳಿ ರವೀಂದ್ರ ಅವರು ಕಾಯಕಲ್ಪ ನೀಡಿದ್ದು, ಇದೀಗ ಕೆರೆಯ ಆವರಣದಲ್ಲಿ ಮರದ ಕೊಂಬೆಗಳನ್ನು ಹಾಕಲಾಗುತ್ತಿದೆ. ತಕ್ಷಣ ಈ ಕೊಂಬೆಗಳನ್ನು ತೆರವುಗೊಳಿಸಿ ಕೆರೆ ಆವರಣದಲ್ಲಿ ಶುಚಿತ್ವ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆನೆಕೆರೆಗೆ ಒತ್ತಿಕೊಂಡಂತೆ ಇರುವ ಕಾಫಿ ತೋಟದಲ್ಲಿನ ಮರಗಳನ್ನು ಕಡಿಯಲಾಗಿದ್ದು, ಅದರ ರೆಂಬೆ ಕೊಂಬೆಗಳನ್ನು ಕೆರೆಯ ಆವರಣದೊಳಗೆ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಭಾರೀ ಗಾತ್ರದ ಮರದ ಕೊಂಬೆಗಳು ಕೆರೆಯೊಳಗೆ ಬೀಳುವ ಸಂಭವವಿದ್ದು, ತಕ್ಷಣ ಸಂಬಂಧಿಸಿದ ತೋಟ ಮಾಲೀಕರು ಮರಗಳನ್ನು ತೆರವುಗೊಳಿಸಬೇಕೆಂದು ಕಿರಣ್, ಮಧು, ಕಿಶೋರ್, ನಾಗರಾಜು ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಂಬಂಧಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿ ಮರದ ಕೊಂಬೆಗಳನ್ನು ತೆರವುಗೊಳಿಸುವಂತೆ ತೋಟ ಮಾಲೀಕರಿಗೆ ನೋಟೀಸ್ ನೀಡಬೇಕು. ಇದರೊಂದಿಗೆ ಆನೆಕೆರೆಯ ಆವರಣಗೋಡೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ನೂತನವಾಗಿ ಕಾಂಪೌಂಡ್ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.