ಸ್ವಾಮಿ, ನಾನು ಶಿವಮೊಗ್ಗೆಯ ಕುಮಾರ... ಕಳೆದ 17 ವರ್ಷದಿಂದ ಹಸಿವಿಗೆ ಸುಟ್ಟ ಪೇಪರ್ ತಿನ್ನುವೆ... ಬಾಯಾರಿಕೆಗೆ ವೇಸ್ಟಾಯಲ್ ಕುಡಿಯುವೆ... ಆತನನ್ನು ಯಾಕೆಂದು ವಿಚಾರಿಸಲಾಗಿ, ನನ್ನನ್ನು ಶಿವಮೊಗ್ಗದಿಂದ ಕಾರವಾರಕ್ಕೆ ಕರೆದೊಯ್ದಿದ್ದ ವ್ಯಕ್ತಿಯೊಬ್ಬ 5 ವರ್ಷ ದುಡಿಸಿಕೊಂಡು ಸಂಬಳ ಕೊಡದೆ ಓಡಿಸಿಬಿಟ್ಟ... ಆಗ ದುಡ್ಡಿಲ್ಲದೆ ಆಯಲ್ ಕುಡಿದು, ಪೇಪರ್ ತಿನ್ನಲು ಅಭ್ಯಸಿಸಿಕೊಂಡೆ... ಎಂದು ವಿವರಿಸತೊಡಗಿದ.ಆಯಲ್ ಯಾಕೆ ಕುಡಿಯುವೆ... ಅಭ್ಯಾಸವಾಗಿ ಬಿಟ್ಟಿದೆ... ಆಹಾರ ಸೇರುವದಿಲ್ಲ; ಪೇಪರ್ ಏಕೆ ಸುಟ್ಟು ತಿನ್ನುವೆ... ಹಾಗೇ ನುಂಗಲು ಆಗುವದಿಲ್ಲ... ಹಾಗಾಗಿ ಸುಟ್ಟು ತಿನ್ನುವೆ... ನಾನು ಬಹಳಷ್ಟು ಕಡೆ ಸುತ್ತಿರುವೆ... ಒಂಭತ್ತು ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಂಡಿರುವೆ ಎಲ್ಲಾ ದೇವರ ದಯೆ...ಖರ್ಚಿಗೆ ಹಣ ಬೇಡವೇ? ಯಾಕೆ ಬೇಕು? ನನ್ನನ್ನು ಚಿಕ್ಕವನಿದ್ದಾಗ ಯಾರೋ ಶಿವಮೊಗ್ಗದಲ್ಲಿ ಬಿಟ್ಟು ಹೋಗಿದ್ದರಂತೆ; ನನಗೆ ಯಾರೂ ಇಲ್ಲ... ಬೇರೆ ಎಣ್ಣೆ (!) ಕುಡಿಯುವೆಯಾ? ಅಯ್ಯೋ... ಸ್ವಾಮಿ, ನಾನು ಮಾಲೆ ಹಾಕಿರುವೆ; ಸುಳ್ಳು ಹೇಳುವದಿಲ್ಲ... ಅಪರೂಪಕ್ಕೆ ಕಾಫಿ, ಚಹಾ ಬಿಟ್ಟು ಬೇರೇನೂ ಸೇವಿಸಲಾರೆ. ಶಬರಿಮಲೆಗೆ ದುಡ್ಡು ಬೇಕೆ? ನಿಮ್ಮ ದುಡ್ಡು ಬೇಡ... ಹಿಂದೊಮ್ಮೆ ‘ಶಕ್ತಿ’ಯಲ್ಲಿ ನನ್ನ ಬಗ್ಗೆ ಬಂದಿದೆಯಂತೆ! ಆ ಪೇಪರ್ ಹುಡುಕಿಕೊಡಿ... ಸಾಕು! ಯಾಕೆ? ನನಗೆ ಅದು ಇಟ್ಟುಕೊಳ್ಳಬೇಕು. ಎಲ್ಲಿ ಅಯ್ಯಪ್ಪ ದೇವಸ್ಥಾನ ಸಿಗುತ್ತದೋ ಅಲ್ಲೇ ರಾತ್ರಿ ಉಳಿಯುವೆ... ನಾಳೆ ಶಬರಿಮಲೆಗೆ ಹೋಗುವೆ... ಹಾಗಾಗಿ ಬಂದಿರುವೆ... ಆ ದೇವರೇ ನನಗೆ ದಿಕ್ಕು. ಯಾರ ಸಹಾಯ ಬೇಡ. ಇಷ್ಟು ಉತ್ತರಿಸಿದ ಕುಮಾರ್ ತನ್ನ ಹೆಗಲಿಗೆ ಗಂಟು ಏರಿಸಿಕೊಂಡು ಹೋಗೇ ಬಿಟ್ಟ... ಆತ ಹೋದದಾರಿ ನೋಡುತ್ತಾ ಕುಳಿತೆ...
-ಶ್ರೀಸುತ.