ಶ್ರೀಮಂಗಲ, ಆ. 4: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಪೊನ್ನಂಪೇಟೆ ನಿನ್ನೆ ಸಂಜೆಗತ್ತಲಿನಲ್ಲಿ ಪಂಜಿನ ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಕೈಯಲ್ಲಿ ಉರಿಯುವ ಪಂಜು ಹಿಡಿದು ಒಡ್ಡೋಲಗ ಸಹಿತವಾಗಿ ಹೆಜ್ಜೆಹಾಕಿದರು. ಮುಖ್ಯರಸ್ತೆ ಯುದ್ದಕ್ಕೂ ಈ ಪಂಜಿನ ಮೆರವಣಿಗೆ ಸಾಗಿದ್ದು, ಬಸ್ ನಿಲ್ದಾಣದಲ್ಲಿ ಬರುವ ಶ್ರೀ ಬಸವೇಶ್ವರ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಮತ್ತೆ ಕೊಡವ ಸಮಾಜದತ್ತ ಸಾಗಿ ಸಮಾಪನ ಗೊಂಡಿತು. ಮೆರವಣಿಗೆಯ ನಡುವೆ ಹಲವಾರು ಮಂದಿ ಪಂಜು ಹಿಡಿದು ಒಡ್ಡೋಲಗಕ್ಕೆ ನೃತ್ಯ ಮಾಡುತ್ತಿದ್ದರಿಂದ ಹಾಗೂ ಎಲ್ಲರ ಕೈಯಲ್ಲಿ ಉರಿಯುವ ಪಂಜು ಇದ್ದ ಹಿನ್ನೆಲೆಯಲ್ಲಿ ಬೆಂಕಿಯ ಪ್ರಜ್ವಲತೆಯೊಂದಿಗೆ ಪೊನ್ನಂಪೇಟೆ ಪಟ್ಟಣ ಸಂಜೆಗತ್ತಲಲ್ಲಿ ಗಮನ ಸೆಳೆಯಿತು.

ಇದಕ್ಕೆ ಕಾರಣವಾಗಿದ್ದು ಅಲ್ಲಿನ ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಕಕ್ಕಡ 18ರ ದಿನದ ವಿಶೇಷ ಕಾರ್ಯಕ್ರಮ, ಹಿತರಕ್ಷಣಾ ಬಳಗದ ವತಿಯಿಂದ ನಡೆದ ಏಳನೇ ವರ್ಷದ ಈ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಮಾತ್ರವಲ್ಲ ಸುತ್ತಮುತ್ತಲ ಹಲವಾರು ಗ್ರಾಮಗಳ ಜನರು ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಮೆರವಣಿಗೆಯ ಬಳಿಕ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಕೊಡವ ಆರ್ಕೆಸ್ಟ್ರಾದೊಂದಿಗೆ ಕಕ್ಕಡ18ರ ವಿಶೇಷತೆಯಾದ ಮದ್ದು ಪಾಯಸ... ಕಕ್ಕಡ ಕೋಳಿಯ ಸವಿಯ ಊಟೋಪಚಾರದೊಂದಿಗೆ ಈ ಸಾರ್ವತ್ರಿಕ ಕಕ್ಕಡ 18ರ ಆಚರಣೆ ಮುಕ್ತಾಯಗೊಂಡಿತು.

ದೇಶಕ್ಕೆ ಕೊಡುಗೆ ನೀಡಿದರೂ

ಜನಾಂಗದ ಹಿತ ಕಾಪಾಡುವಲ್ಲಿ ಹಿನ್ನಡೆ

ಅತಿ ಚಿಕ್ಕ ಜನಾಂಗವಾದರೂ ಕೊಡವರು ಸೈನಿಕ ಪರಂಪರೆಯಿಂದ ದೇಶದ ರಕ್ಷಣೆಗೆ ನೀಡಿದ ಕೊಡುಗೆ ಹಾಗೂ ತ್ಯಾಗ ಅಪಾರವಾಗಿದೆ. ಆದರೆ ಸ್ವತಃ ಕೊಡವರು ತಮ್ಮ ಜನಾಂಗದ ರಕ್ಷಣೆ ಮಾಡಿಕೊಳ್ಳಲು ವಿಫಲವಾಗಿದ್ದಾರೆ. ಜನಾಂಗದ ಕೊಡುಗೆಯನ್ನು ಅರಿತು, ಯಾವದೇ ರಾಜಕೀಯ ಪಕ್ಷ, ಸರಕಾರ ಕೊಡವರ ಹಿತರಕ್ಷಣೆ ಬಗ್ಗೆ ಕಾಳಜಿ ತೋರಿಲ್ಲ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಕೊಡವ ಜನಾಂಗದ ಹಕ್ಕು, ನೆಲ, ಸಂಸ್ಕøತಿ ರಕ್ಷಣೆಗೆ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಇಟ್ಟೀರ ಕೆ. ಬಿದ್ದಪ್ಪ ಪ್ರತಿಪಾದಿಸಿದರು.

(ಮೊದಲ ಪುಟದಿಂದ) ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಚರಿತ್ರೆಯಿಂದ ಪಾಠ ಕಲಿಯದ ಜನಾಂಗವಿದ್ದರೆ ಅದು ಕೊಡವರು. ನಮ್ಮ ಹಿತರಕ್ಷಣೆ ಸ್ವಯಂ ಪ್ರೇರಿತರಾಗಿ ಒತ್ತು ನೀಡಬೇಕು.ಅಷ್ಟು ಕಷ್ಟ ಕಾರ್ಪಣ್ಯ ಎದುರಿಸಿ ನಮ್ಮ ಪೂರ್ವಜರು ಮಾಡಿಟ್ಟ ಈ ಭೂಮಿಯನ್ನು ಆದಾಯ ಬರುವಾಗ ಮಾರುತ್ತಿರುವದು ವಿಪರ್ಯಾಸ. ನೆಲ ಮಾರಾಟ ಮಾಡಿ ನೆಲೆ ಕಳೆದುಕೊಳ್ಳುತ್ತಿದ್ದೇವೆ. ಇದು ನಿಲ್ಲಬೇಕು. ಜನಾಂಗದ ಜನಸಂಖ್ಯೆ ಕ್ಷೀಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಕೊಡವ ದಂಪತಿಗಳಿಗೆ ಒಂದೇ ಮಗು ಎಂಬ ಫ್ಯಾಶನ್ ನಿಲ್ಲಿಸಿ ಕನಿಷ್ಟ 3 ಮಕ್ಕಳು ಹೊಂದಬೇಕು. ಯುವಕರು ಮದ್ಯವ್ಯಸನದಿಂದ ದೂರವಿರಬೇಕು. ಮಕ್ಕಳನ್ನು ಕೊಡವಾಮೆಯ ನೆಲೆಯಲ್ಲಿ, ಕೊಡಗಿನ ಪರಿಸರದಲ್ಲಿ ಬೆಳೆಸ ಬೇಕೆಂದು ಕಿವಿಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು ಮಾತನಾಡಿ ಕೊಡವ ಸಂಸ್ಕøತಿಯ ಹಿರಿಮೆಯನ್ನು ಉಳಿಸಬೇಕು. ಅದರ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿ ಹೇಳಬೇಕಾಗಿದೆ ಎಂದು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆÉಕ್‍ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬದಲು ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಬೇಕು. ಅಲ್ಪ ಸಂಖ್ಯಾತ ಕೊಡವರಿಗೆ ಮಕ್ಕಳೇ ಆಸ್ತಿಯಾಗಿದ್ದಾರೆ. ಹೆಚ್ಚು ಮಕ್ಕಳು ಇರುವವರೇ ಹೆಚ್ಚು ಆಸ್ತಿವಂತರು. ಒಳ್ಳೆಯ ಮಕ್ಕಳು ಸಮಾಜಕ್ಕೆ, ಜನಾಂಗಕ್ಕೆ ಭವಿಷ್ಯದಲ್ಲಿ ದೊಡ್ಡ ಆಸ್ತಿಯಾಗುತ್ತಾರೆ ಎಂದು ಹೇಳಿದರು.

ಕೊಡವ ಜನಾಂಗಕ್ಕೆ ಅಂತರ್ಜಾತಿ ವಿವಾಹ ದೊಡ್ಡ ಶಾಪವಾಗಿದೆ. ಅಂತರ್ಜಾತಿ ವಿವಾಹ ಮತ್ತು ಯುವ ಪೀಳಿಗೆಯಲ್ಲಿ ಮಾದಕ ವಸ್ತು ಚಟ ತಡೆಗಟ್ಟಲು ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಕಾರ್ಯೋನ್ಮುಖವಾಗುವ ಬಗ್ಗೆ ವಿಷಯ ಮಂಡಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. 10 ನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಮಚ್ಚಿಯಂಡ ಕಾವೇರಪ್ಪ ಅವರ ಪರವಾಗಿ ಅವರ ತಂದೆ ಕಾಳಪ್ಪ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ್ತಿ ಮಲ್ಲಮಾಡ ಲೀಲಾವತಿ, ಎನ್.ಇ.ಇ.ಟಿ. ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿರುವ ಅಜ್ಜಿಕುಟ್ಟೀರ ದರ್ಶಿನಿ ಗೌರಮ್ಮ, ಕೋಳೆರ ಗರಿಮಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಕ್ಕಡ ಪದಿನೆಟ್ ವಿಶೇಷÀÀತೆಯ ಮದ್ದ್ ಪಾಯಸ, ಹಾಗೂ ಸಾಂಪ್ರದಾಯಿಕ ಊಟೋಪಚಾರವನ್ನು ಸಾರ್ವತ್ರಿಕವಾಗಿ ಸೇವಿಸಲಾಯಿತು. ಕೊಡವ ಆರ್ಕೆಸ್ಟ್ರಾ ಕಾರ್ಯಕ್ರಮ, ಕಾಳಿಮಾಡ ಮೋಟಯ್ಯ ಅವರಿಂದ ಯೋಗಾಸನ ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ ವಹಿಸಿದ್ದರು. ಸನ್ಮಾನಿತ ಸಾಧಕರ ಪರಿಚಯವನ್ನು ಮಲ್ಲಮಾಡ ಪ್ರಭು ಪೂಣಚ್ಚ ಮಾಡಿದರು. ಕಳ್ಳಿಚಂಡ ದೀನಾ ಕೃಷ್ಣ ಪ್ರಾರ್ಥಿಸಿ ಚೆರಿಯಪಂಡ ರಾಜ ನಂಜಪ್ಪ ಸ್ವಾಗತಿಸಿ, ಉಳುವಂಗಡ ರೋಹಿತ್ ಭೀಮಯ್ಯ ನಿರೂಪಿಸಿ, ಕಾಳಿಮಾಡ ಮೋಟಯ್ಯ ವಂದಿಸಿದರು.