ಮಡಿಕೇರಿ, ಆ. 4: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಭತ್ತ ಹಾಗೂ ಏಲಕ್ಕಿಯೇ ಜೀವಾಳವಾಗಿತ್ತು. ಬೆಲೆ ಕುಸಿತ, ಕಾಯಿಲೆಗೆ ಏಲಕ್ಕಿ ತುತ್ತಾಗಿ ನಾಶವಾದ ಬಳಿಕ, ಭತ್ತಕ್ಕೆ ಬೆಂಬಲ ಬೆಲೆಯಿಲ್ಲದೆ, ವನ್ಯ ಪ್ರಾಣಿ ಹಾವಳಿ, ಕಾರ್ಮಿಕರ ಸಮಸ್ಯೆಯಿಂದಾಗಿ ಕೃಷಿಯನ್ನೂ ಕೈಬಿಟ್ಟ ಕೃಷಿಕ ಜೀವನೋಪಾಯಕ್ಕೆ ಕಂಡುಕೊಂಡಿದ್ದು ‘ಕಾಫಿ’...ಇದೀಗ ಕಾಫಿಯೊಂದೇ ಜಿಲ್ಲೆಯ ರೈತರ ಜೀವಾಳ... ಆದರೆ ಕಾಫಿಗೂ ಕಂಟಕ ಎದುರಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅರೆಬಿಕಾ ಕಾಫಿ ಕಾಂಡಕೊರಕ ಸಮಸ್ಯೆಯಿಂದ ನರಳುತ್ತಾ ನಾಶವಾಗುತ್ತಿರುವಾಗ ದೀರ್ಘಾವಧಿ ಬೆಳೆಯಾಗಿರುವ ರೊಬಸ್ಟಾ ಕಾಫಿಯ ಮೊರೆ ಹೋಗುತ್ತಿರುವಾಗ ರೊಬಸ್ಟಾಗೂ ಕಂಟಕ ಎದುರಾಗುತ್ತಿರುವದು ಆತಂಕ ಮೂಡಿಸಿದೆ. ರೊಬಸ್ಟಾ ಕೂಡ ನಾಶವಾದಲ್ಲಿ ಜಿಲ್ಲೆಯ ಜನತೆಯ ಜೀವನವೇ ಸರ್ವನಾಶವಾದಂತೆಯೇ ಸರಿ.., ರೊಬಸ್ಟಾದೊಳಗೂ ಕಾಂಡಕೊರಕ ಇರುವದು ಬೆಳಕಿಗೆ ಬಂದಿದೆ.ಮಲೆನಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಜನತೆಯ ಜೀವನೋಪಾಯಕ್ಕೆ ಕಾಫಿಯೊಂದೇ ಆಸರೆ... ಆದರೆ ಈಗಾಗಲೇ ಅಧಿಕ ಬೆಲೆ ತಂದುಕೊಡುತ್ತಿದ್ದ ಅರೆಬಿಕಾ ಕಾಫಿ ಕಾಂಡ ಕೊರಕ ಸಮಸ್ಯೆಯಿಂದಾಗಿ ನೆಲಕಚ್ಚುತ್ತಿದೆ. ಇದರೊಂದಿಗೆ ಕಾಡಾನೆ ಹಾವಳಿಯಿಂದಾಗಿ ಕಾಫಿ ಗಿಡಗಳ ಸಹಿತ ಫಸಲು ಕೂಡ ನಾಶವಾಗುತ್ತಿದೆ. ಈ ನಡುವೆ ಬೆಲೆ ಕುಸಿತ ಎಂಬ ಭೂತದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಹೇಗೋ ಅಳಿದುಳಿದ ರೊಬಸ್ಟಾ ಕಾಫಿಯನ್ನೇ ನಂಬಿ ಬದುಕು ಸಾಗಿಸುವಂತಾಗಿದೆ. ರೊಬಸ್ಟಾ ಗಟ್ಟಿ ಮುಟ್ಟಾದ ಗಿಡವಾಗಿದ್ದು, ಇದಕ್ಕೆ ಕಾಯಿಲೆ ಬರುವದಿಲ್ಲವೆಂದೇ ನಂಬಿಕೊಂಡಿರುವ ರೈತನಿಗೆ ಆಘಾತಕಾರಿ ಹಾಗೂ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ. ರೊಬಸ್ಟಾ ಕೂಡ ಕಾಂಡಕೊರಕಕ್ಕೆ ತುತ್ತಾಗಿ ತನ್ನ ಆಯುಷ್ಯ ಕಡಿದುಕೊಳ್ಳುತ್ತಿರುವ ಆತಂಕಕಾರಿ ವಿಚಾರ ಇದಾಗಿದೆ.

ರೊಬಸ್ಟವೂ ಬಲಿಷ್ಠವಲ್ಲ

ಅರೆಬಿಕಾ ಗಿಡ ಮೆದುವಾಗಿದ್ದು, ಅದಕ್ಕೆ ಕಾಂಡಕೊರಕ ಸುಲಭವಾಗಿ ಬಾಧಿಸಲಿದೆ. ರೊಬಸ್ಟಾ ಬಲಿಷ್ಠವಾಗಿದ್ದು, ಅದಕ್ಕೆ ಬಾಧಿಸಲಾರದೆಂದೇ ನಂಬಿದ್ದೆವು. ಆದರೆ, ಅರೆಬಿಕಾ ಗಿಡಗಳು ನಾಶವಾಗುತ್ತಿದ್ದಂತೆ ತನ್ನ ಆಹಾರಕ್ಕೆ ಈ ಕೀಟ ಆಯ್ದುಕೊಂಡಿದ್ದೇ ಪಕ್ಕದಲ್ಲಿದ್ದ ರೊಬಸ್ಟಾ ಗಿಡಗಳನ್ನು. ಆದರೆ, ರೊಬಸ್ಟಾ ಗಿಡಗಳ ಕಾಂಡಗಳಲ್ಲಿ ಕೀಟಗಳು ಹೊರಬಂದಿರುವದಾಗಲಿ, ಕೊರಕದಿಂದಾಗಿರುವ ಗಾಯಗಳಾಗಲೀ ಕಂಡು ಬಾರದಿರುವದರಿಂದ ಬಾಧೆಯಿರುವದು ಗೋಚರಿಸಲಿಲ್ಲ. ರೊಬಸ್ಟಾದಲ್ಲಿ ಕಾಂಡಕೊರಕ ಬದುಕಲಾರದೆಂದೇ ತಿಳಿಯಲಾಗಿತ್ತು. ಆದರೆ ಇದೀಗ ರೊಬಸ್ಟಾದಲ್ಲೂ ಕಾಂಡ ಕೊರಕವಿರುವದು ಪತ್ತೆಯಾಗಿದೆ. 60 ರಿಂದ 80 ವರ್ಷ ಪ್ರಾಯದ ರೊಬಸ್ಟಾ ಗಿಡಗಳಲ್ಲಿ ಈ ಬಾಧೆ ಕಂಡುಬಂದಿದ್ದು, ಇದರಿಂದಾಗಿ 10-15 ವರ್ಷಗಳ ಹಿಂದೆಯೇ ಈ ಗಿಡಗಳು ಈ ಬಾಧೆಗೆ ತುತ್ತಾಗಿರುವದು ಕಂಡುಬಂದಿದೆ. ರೊಬಸ್ಟಾ ಕೂಡ ಬಲಿಷ್ಠ ಅಲ್ಲವೆಂಬದು ಇರದಿಂದ ಸಾಬೀತಾಗಿದೆ. ಗಿಡಗಳಿಗೆ ತಡೆದುಕೊಳ್ಳುವ ಶಕ್ತಿ ಇರುವದರಿಂದ ಕೂಡಲೇ ಅರಿವಿಗೆ ಬರುವದಿಲ್ಲ. ಗಿಡಕ್ಕೆ ವಯಸ್ಸಾಗುತ್ತಿದ್ದಂತೆ ಗೋಚರಿಸುತ್ತದೆ.

ಪಾಲಿಬೆಟ್ಟ-ಸಿದ್ದಾಪುರದಲ್ಲಿ

ರೊಬಸ್ಟಾಗೆ ಕಾಂಡಕೊರಕ ಬಾಧೆ ಇರುವದು ಸಿದ್ದಾಪುರ ಹಾಗೂ ಪಾಲಿಬೆಟ್ಟ ವಿಭಾಗದಲ್ಲಿ ಕಂಡುಬಂದಿದೆ. ಸಿದ್ದಾಪುರದಲ್ಲಿ 2015ರಲ್ಲಿಯೇ ಪತ್ತೆಯಾಗಿದೆ. ಅಲ್ಲಿನ ಬಜೆಕೊಲ್ಲಿ ತೋಟದಲ್ಲಿ ವ್ಯಾಪಕವಾಗಿ ಈ ಬಾಧೆ ಪತ್ತೆಯಾಗಿತ್ತು. ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿಗಳು ಭೇಟಿ ಮಾಡಿ ಪರಿಶೀಲಿಸಿ ಪತ್ತೆ ಹಚ್ಚಿದ ಬಳಿಕ ಸಂಪೂರ್ಣ ಗಿಡಗಳನ್ನು ಕಿತ್ತು ಹೊಸದಾಗಿ ನೆಡಲಾಗಿದೆ. ಇದೀಗ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪಾಲಿಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಈ ಬಾಧೆ ಕಂಡುಬಂದಿದೆ. ಅಲ್ಲಿನ ಕ್ರೆಗ್ ಮೋರ್ ತೋಟದಲ್ಲಿ 60 ರಿಂದ 80 ವರ್ಷ ಪ್ರಾಯದ ಗಿಡಗಳಲ್ಲೂ ಕೂಡ ಕೀಟಗಳು ಹೊರಬಂದಿರುವದು ಗೋಚರಿಸಿದೆ. 50 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಶೇ. 50 ರಿಂದ 60 ರಷ್ಟು ಬಾಧಿಸಿದ್ದು, ಸಣ್ಣ ಗಿಡಗಳಲ್ಲೂ ಕಂಡುಬಂದಿದೆ. ವಿಜ್ಞಾನಿಗಳು ಈ ಬಗ್ಗೆ ಖಾತರಿಪಡಿಸಿದ್ದು, ಇದೀಗ ಗಿಡಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಈ ತೋಟದ ಅಕ್ಕ-ಪಕ್ಕ ಇರುವ ತೋಟಗಳಲ್ಲೂ ಈ ಬಾಧೆ ವ್ಯಾಪಿಸಿರುವ ಬಗ್ಗೆ ತಿಳಿದು ಬಂದಿದೆ.

(ಮೊದಲ ಪುಟದಿಂದ)

ಬಿಸಿಲಿನಿಂದ ನೆರವು

ಕಾಫಿ ತೋಟಗಳಲ್ಲಿ ಬಿಸಿಲು ಬೀಳುವದು ಹೆಚ್ಚಾಗಿದ್ದರೆ ಈ ಕೀಟಗಳಿಗೆ ಹೆಚ್ಚಾಗಿ ಅನುಕೂಲ ವಾಗಲಿದೆ. ಸಾಧ್ಯವಾದಷ್ಟು ಹೆಚ್ಚಿಗೆ ಬಿಸಿಲು ಬೀಳದಂತೆ ನೋಡಿಕೊಂಡರೆ ಕೀಟ ಬಾಧೆಯನ್ನು ಹತೋಟಿಯಲ್ಲಿಡಬಹುದೆಂದು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹೇಳುತ್ತಾರೆ. ಅರೆಬಿಕಾ ತೋಟಗಳಲ್ಲಿ ಶೇ. 60 ರಷ್ಟು ನೆರಳಿರಬೇಕು, ರೊಬಸ್ಟಾ ತೋಟದಲ್ಲಿ ಶೇ. 35 ರಿಂದ 40 ರಷ್ಟು ನೆರಳು ಇರಲೇಬೇಕು. ಇದನ್ನು ಅನುಸರಿಸಿದರೆ ಬಾಧಿಸುವದನ್ನು ತಡೆಗಟ್ಟಬಹುದಾಗಿದೆ. ಕೀಟಗಳು ಬಿಸಿಲು ಬೀಳುವ ಜಾಗವನ್ನು ಹುಡುಕಿ ಅಲ್ಲಿ ಮೊಟ್ಟೆ ಇಡುತ್ತವೆ. ನಂತರ ಸಂತಾನೋತ್ಪತ್ತಿಯಾಗುತ್ತದೆ. ಹಾಗಾಗಿ ನೆರಳು ಇರುವಂತೆ ನೋಡಿಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.

ಮಧ್ಯಂತರ ಗಿಡದಿಂದ ಬಾಧೆ

ರೋಬಸ್ಟಾ ಗಿಡನೆಟ್ಟು ಫಸಲು ಕೊಡಲು ಕನಿಷ್ಟವೆಂದರೆ 5 ವರ್ಷಗಳ ಅವಧಿ ಬೇಕಾಗುತ್ತದೆ. ಹಾಗಾಗಿ ಬಹುತೇಕ ಎಲ್ಲರೂ ರೊಬಸ್ಟಾ ಗಿಡಗಳ ಮಧ್ಯ ಸಾಲಿನಲ್ಲಿ ಅರೆಬಿಕಾ ಗಿಡಗಳನ್ನು ಮಧ್ಯಂತರ ಬೆಳೆಯಾಗಿ ಬೆಳೆಯುತ್ತಾರೆ. ಇದರಿಂದಾಗಿ ಅರೆಬಿಕಾಗೆ ಬಾಧಿಸುವ ಕೀಟಗಳು ಅವುಗಳನ್ನು ನಾಶಗೊಳಿಸುತ್ತವೆ. ಅರೆಬಿಕಾ ಗಿಡಗಳು ನಾಶವಾದ ಬಳಿಕ ಕೀಟಗಳು ಅನಿವಾರ್ಯವಾಗಿ ರೊಬಸ್ಟಾ ಗಿಡವನ್ನು ಅವಲಂಭಿಸುತ್ತವೆ. ಹಾಗಾಗಿ ರೋಬಸ್ಟಾ ಮಧ್ಯೆ ಅರೆಬಿಕಾ ಗಿಡಗಳನ್ನು ನೆಡಬಾರದು ಎಂದು ವಿಜ್ಞಾನಿಗಳು ಸಲಹೆ ಮಾಡಿದ್ದಾರೆ. ಪಾಲಿಬೆಟ್ಟ ಹಾಗೂ ಸಿದ್ದಾಪುರದಲ್ಲಿ ಅರೆಬಿಕಾ ಗಿಡಗಳನ್ನು ನೆಟ್ಟು ಸರಿಯಾದ ರೀತಿಯಲ್ಲಿ ಪೋಷಣೆ ಮಾಡದ್ದರಿಂದ ಬಾಧೆ ವ್ಯಾಪಿಸಿರುವದಾಗಿ ತಿಳಿಸಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿ, ಬೆಲೆಕುಸಿತ, ಶಂಖುಹುಳ, ಕಾಡಾನೆ ಧಾಳಿ ನಡುವೆ ಹೇಗೋ ಸುಧಾರಿಸಿಕೊಂಡು ಜೀವನ ಸಾಗಿಸುತ್ತಿರುವ ಜಿಲ್ಲೆಯ ಕೃಷಿಕರಿಗೆ ಈ ಸಣ್ಣ ಕೀಟ ಭಾರೀ ದೊಡ್ಡ ಹೊಡೆತ ನೀಡುತ್ತಿದೆ. ಸಂಪೂರ್ಣ ನಾಶವಾಗಿ ಕೈ ಸುಟ್ಟುಕೊಳ್ಳುವ ಮುನ್ನ ಎಚ್ಚೆತ್ತುಕೊಂಡು ಕೀಟ ಬಾಧೆಯನ್ನು ಹತೋಟಿಯಲ್ಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಜನತೆಯ ಉಳಿಗಾಲಕ್ಕೆ ಇರುವ ಏಕೈಕ.., ಕಟ್ಟಕಡೆಯ ಬೆಳೆಗೂ ಅಪಾಯದ ಗಂಟೆನಾದ ಮೊಳಗಿರುವದು ದುರಂತವೆಂದೇ ಹೇಳಬಹುದು. ಈ ಹೊಡೆತಗಳಿಂದ ಬೆಳೆಗಾರರನ್ನು ರಕ್ಷಿಸುವರಾರೆಂಬದೇ ಕಾಡುತ್ತಿರುವ ಪ್ರಶ್ನೆ..!? -ಕುಡೆಕಲ್ ಸಂತೋಷ್