ಮಡಿಕೇರಿ, ಆ. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣ ಹಾಗೂ ರೂ. 4 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ಕಾಮಗಾರಿಯ ಅವ್ಯವಹಾರ ಆರೋಪದ ಬಗ್ಗೆ; ತಾವು ಮುಂದಿನ ದಿನಗಳಲ್ಲಿ ಖುದ್ದು ಪರಿಶೀಲಿಸಿದ ಬಳಿಕ ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸುಳಿವು ನೀಡಿದ್ದಾರೆ.
ಸಾರ್ವಜನಿಕ ದೂರುಗಳ ಬಗ್ಗೆ ನಿನ್ನೆ ‘ಶಕ್ತಿ’ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು ಸರಕಾರದ ಹಣ ವ್ಯರ್ಥವಾಗದಂತೆ ಸರಕಾರ ನಿಗಾವಹಿಸಲಿದ್ದು, ಯಾವದೇ ಹಣ ದುರುಪಯೋಗ ಹಾಗೂ ಅವ್ಯವಹಾರವನ್ನು ರಾಜ್ಯ ಮುಖ್ಯಮಂತ್ರಿಗಳು ಸಹಿಸುವದಿಲ್ಲ ವೆಂದು ನೆನಪಿಸಿದರು.ಜನತೆಯ ಬೇಕು ಬೇಡಿಕೆಗಳು; ಮೂಲಭೂತ ಸೌಕರ್ಯ ಕಲ್ಪಿಸದೆ ಕಾನೂನು ಬಾಹಿರವಾಗಿ ಯಾರೇ ವರ್ತಿಸಿದರೂ, ಅಂತಹ ಅಧಿಕಾರಿಗಳ ಬಗ್ಗೆ ದೂರುಗಳು ಕೇಳಿ ಬಂದರೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದು ಎಂದ ಸಚಿವರು; ಜಿಲ್ಲೆಯಿಂದ ಯಾರೊಬ್ಬರೂ ತಮ್ಮ ಅರಿವಿಗೆ ಬಾರದೆ ವರ್ಗಾವಣೆಗೊಂಡರೆ, ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಜಿ.ಪಂ. ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
(ಮೊದಲ ಪುಟದಿಂದ)
ಹಣಕ್ಕೆ ಕೊರತೆಯಿಲ್ಲ : ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಹಾಳಾಗಿರುವ ರಸ್ತೆಗಳು ಶಾಲಾ ಕಟ್ಟಡಗಳು, ಸಾರ್ವಜನಿಕ ಆಸ್ತಿ - ಪಾಸ್ತಿ ಬಗ್ಗೆ ಹಣದ ಕೊರತೆ ಇಲ್ಲವೆಂದು ನುಡಿದ ಸಚಿವರು, ಪ್ರತಿ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆಯೂ ಆಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉತ್ತರ ಬೇಕಿದೆ : ಕೊಡಗಿನಲ್ಲಿ ಭೂ ಪರಿವರ್ತನೆ ಗೊಂದಲ; ಕೋವಿ ಹಕ್ಕು ಸೇರಿದಂತೆ ಯಾವದೇ ಸಮಸ್ಯೆಗಳಿದ್ದರೆ; ಅಂತಹ ದೂರುಗಳನ್ನು ಸಾರ್ವಜನಿಕರಿಗೆ ಹಿಂತಿರುಗಿಸುವ ಬದಲು ಸರಕಾರದ ಗಮನಕ್ಕೆ ತಮ್ಮ ಮುಖಾಂತರ ತರುವಂತೆ ಸೂಚಿಸಿದರು. ಅಲ್ಲಿ ಉತ್ತರ ಹುಡುಕಲಾಗುವದು ಎಂದು ನುಡಿದ ಅವರು, ಜನರಿಗೆ ವಿನಾಃಕಾರಣ ಕಿರುಕುಳ ಆಗದಂತೆ ನೋಡಿಕೊಳ್ಳವದು ಸರಕಾರದ ಕಾಳಜಿಯೆಂದು ಮಾರ್ನುಡಿದರು.
ಈಗಾಗಲೇ ಅನೇಕರು ತಮಗೆ ಸಲ್ಲಿಸಿರುವ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಹಸ್ತಾಂತರಿಸಿದ್ದು, ತಾ. 15ರ ಬಳಿಕ ಕೊಡಗು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ; ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ತಾವೇ ಗಮನ ಹರಿಸುವದಾಗಿ ಸಚಿವರು ಸ್ಪಷ್ಟೋತ್ತಿಯಾಡಿದರು.