ವರದಿ:- ಅಂಚೆಮನೆಸುಧಿ
*ಸಿದ್ದಾಪುರ, ಆ. 4: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣಾ ಕಾವು ತಣ್ಣಗಾಗುವ ಮುನ್ನವೇ ಕೊಡಗಿನ ಜನತೆ ಮತ್ತೊಂದು ಚುನಾವಣೆ ಎದುರಿಸಬೇಕಾಗಿದೆ. ತಾ. 18 ಮತ್ತು 19 ರಂದು ನಡೆಯಲಿರುವ ಧವಸ ಭಂಡಾರ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯಲಿದ್ದು ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 101 ಕೃಷಿ ಪತ್ತಿನ ಸಹಕಾರ ಸಂಘವಿದ್ದು ಹೆಚ್ಚಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯುವ ಚುನಾವಣೆ ರಾಜ್ಯ ವಿಧಾನ ಸಭಾ ಚುನಾವಣೆಯನ್ನು ಮೀರಿಸುವಂತಿದೆ.
ನಾಮ ಪತ್ರ ಸಲ್ಲಿಕೆ ಪ್ರಾರಂಭಗೊಂಡಿದ್ದು ದÀವಸ ಭಂಡಾರದ ಚುನಾವಣೆಗೆ ಸ್ಪರ್ಧಿಸುವವರಿಗೆ ನಾಮಪತ್ರ ಸಲ್ಲಿಸಲು ತಾ. 9 ಕೊನೆಯ ದಿನವಾಗಿದ್ದು, ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಗೆ ನಾಮಪತ್ರ ಸಲ್ಲಿಸುವವರಿಗೆ ತಾ. 10 ಕೊನೆಯ ದಿನವಾಗಿರುತ್ತದೆ.
ಈ ಹಿಂದೆ ನಿರ್ದೇಶಕ, ಅಧ್ಯಕ್ಷರಾಗಿದ್ದವರೊಂದಿಗೆ ನೂತನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳೊಂದಿಗೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಲವು ಕಡೆ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸಿದ್ದರೆ ಕೆಲವು ಭಾಗಗಳಲ್ಲಿ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ವೈದ್ಯನಾಥ ವರದಿ ನಂತರ ಸಹಕಾರ ಸಂಘಗಳಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಈ ಹಿಂದೆ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಇತ್ತು. ಏತನ್ಮಧ್ಯೆ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ, ಅಲ್ಪಸಂಖ್ಯಾತರಿಗೆ ಉಚಿತ ಸದಸ್ಯತ್ವ ನೀಡುವ ಯೋಜನೆ ಜಾರಿಗೆ ತಂದಿತ್ತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಸದಸ್ಯರು ಕೇವಲ ಮತ ಚಲಾವಣೆಗೆ ಬರುವದು ಮತ್ತು ಮಹಾಸಭೆಗಳಲ್ಲಿ ಮುಖ ತೋರಿಸಿ ಡಿವಿಡೆಂಟ್ ಪಡೆದು ಹೋಗುತ್ತಿದ್ದರು. ವೈದ್ಯನಾಥ ವರದಿ ಬಂದ ನಂತರ ಕೆಲ ಬದಲಾವಣೆಗಳನ್ನು ತರಲಾಗಿದ್ದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲೇವಾದೇವಿ ನಡೆಸಿ ಯಾವದೇ ರೂಪದಲ್ಲಿ ಕನಿಷ್ಟ 3500 ಮೊತ್ತದ ಬಡ್ಡಿ ಕಟ್ಟಿದವರಿಗೆ ಮಾತ್ರವೇ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಕಡ್ಡಾಯವಾಗಿ ಮೂರು ಮಹಾ ಸಭೆಗಳಿಗೆ ಹಾಜರಾಗಿರಬೇಕು ಎಂಬ ನಿಯಮವನ್ನು ತರಲಾಗಿದೆ. ಇದನ್ನು ಉಲ್ಲಂಘಿಸಿದವರು ಮತದಾನದಿಂದ ವಂಚಿತರಾಗಲಿದ್ದಾರೆ.