ಕುಶಾಲನಗರ, ಆ. 3: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು ಸಧ್ಯದಲ್ಲಿಯೇ ನೂತನ ನೇಮಕಾತಿ ನಡೆಯಲಿದೆ ಎಂದು ಎಸ್‍ಪಿ ಡಾ.ಸುಮನಾ ಡಿ.ಪಿ. ಹೇಳಿದರು. ಕೊಡಗು ಎಸ್‍ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಾ.ಸುಮನಾ ಸುದ್ದಿಗಾರರ ಜೊತೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 150 ಮಂದಿ ಸಿಬ್ಬಂದಿ ಕೊರತೆ ಇದ್ದು ಸರ್ಕಾರದ ನಿಯಮಾವಳಿ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಸಿ ಅಗತ್ಯವಿರುವ ಠಾಣೆಗಳಿಗೆ ನಿಯೋಜಿಸಲಾಗುವದು ಎಂದರು.

ಆದ್ಯತೆ ಮೇಲೆ ಜಿಲ್ಲೆಯ ಪೊಲೀಸ್ ವಸತಿಗೃಹಗಳ ದುರಸ್ತಿ ಮತ್ತು ಹೊಸ ಕಟ್ಟಡಗಳ ನಿರ್ಮಾಣಗಳನ್ನು ಮಾಡಲಾಗುತ್ತದೆ. ಕುಶಾಲನಗರದಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ ಪೊಲೀಸ್ ವಸತಿಗೃಹಗಳ ತೆರವಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಂತರ ಸರ್ಕಾರಿ ಅನುದಾನ ಬಳಸಿಕೊಂಡು ಹೊಸ ವಸತಿಗೃಹಗಳನ್ನು ನಿರ್ಮಿಸಲಾಗುತ್ತದೆ ಎಂದು ಮಾಹಿತಿ ಒದಗಿಸಿದರು.

ಎಸ್‍ಪಿ ಡಾ.ಸುಮನಾ ಬುಧವಾರ ಮೃತರಾದ ಸಂಚಾರಿ ಠಾಣೆ ಮುಖ್ಯ ಪೇದೆ ರಾಜ ಅವರ ಕೂಡ್ಲೂರು ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿಗಳು ಕುಶಾಲನಗರ ಪಟ್ಟಣದಲ್ಲಿ ಅಗ್ನಿಗೆ ಆಹುತಿಯಾದ ವ್ಯಾಪಾರ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಡಿವೈಎಸ್‍ಪಿ ಪಿ.ಕೆ. ಮುರಳೀಧರ್, ವೃತ್ತನಿರೀಕ್ಷಕ ಕ್ಯಾತೇಗೌಡ, ನಗರ ಠಾಣಾಧಿಕಾರಿ ಜಗದೀಶ್, ಗ್ರಾಮಾಂತರ ಠಾಣಾಧಿಕಾರಿ ನವೀನ್ ಗೌಡ ಇದ್ದರು.