ನಾಪೋಕ್ಲು, ಆ. 3: ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆ ಯುತ್ತವೆ. ಅವುಗಳಲ್ಲಿ ಕಕ್ಕಬೆ ಯವಕಪಾಡಿಯ ನೀಲಕಂಡಿ ಜಲಪಾತವೂ ಒಂದು.ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತಿದ್ದು ಅವುಗಳಲ್ಲೊಂದು ನದಿಯಿಂದ ಉದ್ಬವಿಸಿದ ನೀಲಕಂಡಿ ಜಲಪಾತ ಬೋರ್ಗರೆದು ಧುಮ್ಮಿಕ್ಕುತ್ತಿದೆ.ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಈ ಜಲಪಾತ ಮನಮೋಹಕ. ಹಸಿರುರಾಶಿಯ ನಡುವೆ ಬೆಳ್ನೊರೆಯ ಈ ಜಲಪಾತದ ಸೊಬಗು ವರ್ಣಿಸಲಸದಳ.ವೀಕ್ಷಕರ ನೋಟಕ್ಕೆ ಸುಲಭದಲ್ಲಿ ಸಿಕ್ಕದೇ ದೂರವೇ ಉಳಿದಿರುವ ಜಲಪಾತ ಈಗ ರಭಸದಿಂದ ಧುಮ್ಮಿಕ್ಕುತ್ತಿದೆ.

ಸುಮಾರು 300 ಅಡಿ ಎತ್ತರದಿಂದ ಧುಮುಕುವ ನೀಲಕಂಡಿ ಜಲಪಾತದ ನೋಟ ದೂರಕ್ಕೆ ಕಾಣಸಿಗುತ್ತದೆ.

ಕಕ್ಕಬ್ಬೆಯ ಹನಿವ್ಯಾಲಿ ರೆಸಾರ್ಟ್‍ನಿಂದ ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಎತ್ತರೆತ್ತರಕ್ಕೇರುತ್ತಿದ್ದಂತೆ ಎಡಕ್ಕೆ ತಿರುಗಿ ಸಾಗಿದರೆ ಮಾದಂಡ ಅಬ್ಬಿ ತಲಪಬಹುದು. ಮಳೆಗಾಲದಲ್ಲಿ ಸಂತೋಷದಿಂದ ಜಲಧಾರೆಯ ಸೊಬಗು ಸವಿಯಬಹುದು.ಎಲ್ಲೆಲ್ಲೂ ಹಸಿರು ಸಿರಿ.ನಡುವೆ ನೀಲಕಂಡಿ ಜಲಧಾರೆಯ ಬೆಳ್ನೊರೆ.ಇದರ ನೋಟ. ಹಸಿರು ವೃಕ್ಷಗಳ ನಡುವೆ ಸಿಕ್ಕ ಇಳಿಜಾರಿನಲ್ಲಿ ಬಂಡೆಗಲ್ಲುಗಳ ಮೇಲೆ ಚೆಂದದ ನೋಟ ಸವಿಯಲು ಎರಡು ಕಣ್ಣುಗಳು ಸಾಲವು.ಸಾಹಸಪ್ರಿಯರು ಮಾತ್ರ ಪ್ರಯತ್ನಪಟ್ಟು ಸಾಗಿದರೆ ನೀಲಕಂಡಿ ಅಬ್ಬಿಯ ಚೆಲುವನ್ನು ಆಸ್ವಾದಿಸಬಹುದು. - ದುಗ್ಗಳ ಸದಾನಂದ