ಸಿದ್ದಾಪುರ, ಆ. 3: ಶುಚಿತ್ವವನ್ನು ಕಾಪಾಡಬೇಕಾದ ಸಿದ್ದಾಪುರ ಗ್ರಾಮ ಪಂಚಾಯಿತಿಯು ಪಂಚಾಯಿತಿಯ ಆವರಣದೊಳಗೆ ರಾಶಿಗಟ್ಟಲೆ ಕಸವನ್ನು ಶೇಖರಿಸಿಟ್ಟಿರುವ ಬಗ್ಗೆ ಗ್ರಾಮಸ್ಥರು ಪಂಚಾಯಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂದೇ ಖ್ಯಾತಿ ಪಡೆದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಈವರೆಗೂ ಶಾಶ್ವತ ಜಾಗವನ್ನು ಕಂಡು ಹಿಡಿದುಕೊಳ್ಳದೇ ಆಡಳಿತ ಮಂಡಳಿಯು ರಾಜಕೀಯದಲ್ಲೇ ಕಾಲಹರಣ ಮಾಡುತ್ತಿದೆ ಎಂಬ ಆರೋಪಗಳು ಕೇಳ ಬರುತ್ತಿದೆ.
ಕಸವನ್ನು ಬೇರೆಕಡೆ ಸ್ಥಳಾಂತರ ಮಾಡಬೇಕಾದ ಗ್ರಾಮ ಪಂಚಾಯಿತಿಯು ಸ್ವಚ್ಛತೆಯ ಬಗ್ಗೆ ಆಸಕ್ತಿ ವಹಿಸದೇ ಕೊಳೆತ ತ್ಯಾಜ್ಯಗಳನ್ನು ಚೀಲದಲ್ಲಿ ಕಟ್ಟಿ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲೇ ರಾಶಿ ಹಾಕಲಾಗಿದೆ.
ತ್ಯಾಜ್ಯಗಳು ಮಳೆಯಲ್ಲಿ ಸಿಲುಕಿ ಕೊಳೆತು ದುರ್ನಾತ ಬೀರುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿ ಹಾಗೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಲಿ ಗಮನ ಹರಿಸದೇ ತಮಗೇನು ಸಂಬಂಧವಿಲ್ಲದಂತೆ ಗಾಢ ಮೌನಕ್ಕೆ ಜಾರಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಆವರಣದಲ್ಲಿ ರಾಶಿ ಹಾಕಿದ್ದರೂ ಇದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ಹುಳುಗಳು, ನೊಣಗಳು ಉತ್ಪತ್ತಿಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಪಂಚಾಯಿತಿಯ ಆವರಣದೊಳಗೆ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಕಚೇರಿಯ ಸಮೀಪದಲ್ಲಿರುವ ಅಂಚೆ ಕಚೇರಿಯ ನಾಲ್ವರು ಸಿಬ್ಬಂದಿಗಳಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆದರೂ ಮತ್ತೊಮ್ಮೆ ಅದೇ ಜಾಗದಲ್ಲಿ ತ್ಯಾಜ್ಯಗಳನ್ನು ರಾಶಿಗಟ್ಟಲೆ ಹಾಕಿ ಅಶುಚಿತ್ವ ತಾಂಡವವಾಡುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತ ಪಂಚಾಯಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.