ಮಡಿಕೇರಿ, ಆ. 3: ಜಿಲ್ಲೆಯಾದ್ಯಂತ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಅಭಿಯಾನಕ್ಕೆ ಚಾಲನೆ ದೊರೆಯಿತು. ಜಿಲ್ಲೆಯ ಎಲ್ಲಾ ಗ್ರಾ.ಪಂ., ತಾ.ಪಂ., ಅಂಗನವಾಡಿ, ಶಾಲೆಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಕಾರ್ಯಕ್ರಮ ನಡೆಯಿತು.
ತಾ. 30 ರವರೆಗೆ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಸಮೀಕ್ಷೆ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತು ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾ.ಪಂ. ವ್ಯಾಪ್ತಿಯ ಸಂತೆ ಸ್ಥಳಗಳು, ಕುಡಿಯುವ ನೀರು ಸಂಗ್ರಹ ಸ್ಥಳಗಳು, ಪಂಚಾಯಿತಿ ಕಚೇರಿ ಹೀಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲಿ ಸ್ವಚ್ಛತೆ ಹಾಗೂ ಶುಚಿತ್ವ ಕಾಪಾಡುವ ಉದ್ದೇಶದಿಂದ ಮೌಲ್ಯಮಾಪನ ನಡೆಯಲಿದೆ. ಜೊತೆಗೆ ಜನಜಾಗೃತಿ ಮೂಡಿಸುವದು, ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಉದ್ದೇಶವಾಗಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಬಾಬು ತಿಳಿಸಿದ್ದಾರೆ.
ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಸಮೀಕ್ಷೆಗೆ ಸಂಬಂಧಿಸಿದಂತೆ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಂದ, ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಸ್ವಚ್ಛತೆಗೆ ಸಂಬಂಧಿಸಿದ ಪ್ರಚಾರದ ದ್ವನಿ ಮುದ್ರಣ, ಸ್ವಚ್ಛತಾ ಸರ್ವೇಕ್ಷಣಾ ಸ್ವಚ್ಛತೆ ಗೀತೆ, ಸ್ವಚ್ಛತಾ ಘೋಷಣೆಗಳನ್ನು ಬರೆಯುವಂತೆ ಪ್ರೋತ್ಸಾಹಿಸುವದು ಹಾಗೂ ಅತ್ಯುತ್ತಮವಾದುದನ್ನು ಆಯ್ಕೆಗೊಳಿಸಿ ಗ್ರಾಮ ಪಂಚಾಯಿತಿ ವತಿಯಿಂದ ಇಲಾಖಾ ವೆಬ್‍ಸೈಟ್‍ನಲ್ಲಿ ದಾಖಲಿಸುವ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.