ಮಡಿಕೇರಿ, ಆ.3 : ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಖಾಸಗಿ ಬಸ್ ನಿಲ್ದಾಣ ಅವೈಜ್ಞಾನಿಕವಾಗಿದ್ದು, ಈ ಯೋಜನೆಯಲ್ಲಿ ಮಹಾಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ಇದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ, ಭ್ರಷ್ಟಾಚಾರ ಬಯಲಾಗುವವರೆಗೆ ಬಸ್‍ಗಳನ್ನು ಹೊಸ ನಿಲ್ದಾಣದಲ್ಲಿ ನಿಲುಗಡೆ ಮಾಡುವದಿಲ್ಲವೆಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರ ಪವನ್ ಪೆಮ್ಮಯ್ಯ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಭ್ರಷ್ಟಚಾರ ನಿಗ್ರಹ ದಳಕ್ಕೆ ದೂರು ನೀಡುವದಾಗಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರುವ ಮೂಲಕ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವದೆಂದರು.
ಈಗಾಗಲೇ ಗುತ್ತಿಗೆದಾರರಿಗೆ ಪಾವತಿಯಾಗಿರುವ ಯೋಜನೆಯ ಮೊತ್ತ 4.90 ಕೋಟಿ ರೂ.ಗಳನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಪವನ್ ಪೆಮ್ಮಯ್ಯ ಆಗ್ರಹಿಸಿದರು.
ಅಗತ್ಯ ಸೌಲಭ್ಯಗಳಿಲ್ಲದೆ, ಅತ್ಯಂತ ಕಳಪೆ ಗುಣಮಟ್ಟದಿಂದ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಮತ್ತು ಸಮಗ್ರ ತನಿಖೆ ನಡೆಸಬೇಕು. ಅಲ್ಲಿಯವರೆಗೆ ನೂತನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಕಾರ್ಮಿಕರು ಕಾರ್ಯ ನಿರ್ವಹಿಸುವದಿಲ್ಲವೆಂದು ತಿಳಿಸಿದರು.
ಅತ್ಯಂತ ತರಾತುರಿಯಿಂದ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿರುವದರ ಹಿಂದೆ ಜನಪರವಾದ ಕಾಳಜಿಗಳಿಲ್ಲ, ಬದಲಾಗಿ ಸ್ವಹಿತಾಸಕ್ತಿಗಳು ಅಡಗಿದೆ. ಖಾಸಗಿ ಬಸ್ ಕಾರ್ಮಿಕರ ಸಂಘದಿಂದ ನೂತನ ಬಸ್ ನಿಲ್ದಾಣವನ್ನು ಪರಿಶೀಲಿಸಿದಾಗ, ಕಾಮಗಾರಿ ಸಮರ್ಪಕವಾಗಿ ನಡೆಯದಿರುವ ಅಂಶಗಳು ಕಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪವನ್ ಪೆಮ್ಮಯ್ಯ ಅಪೂರ್ಣ ಕಾಮಗಾರಿಯ ನಡುವೆ ಬಸ್‍ಗಳು ಸಂಚರಿಸಿದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಮುಂಭಾಗ, ಇಂದಿರಾ ಕ್ಯಾಂಟಿನ್ ಹಿಂಭಾಗ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಯಾಣಿಕರಿಗೆ ಕನಿಷ್ಟ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯನ್ನು ಈ ನಿಲ್ದಾಣದಲ್ಲಿ ಕಲ್ಪಿಸಿಲ್ಲ. ಬಸ್ ನಿಲುಗಡೆಯಾಗುವ ಸ್ಥಳದ ಮೇಲ್ಭಾಗದಲ್ಲಿ ಅಂಗೈ ಅಗಲದ ಮೇಲ್ಛಾವಣಿ ನಿರ್ಮಿಸಿರುವದರಿಂದ ಮಳೆಯ ಸಂದರ್ಭ ಬಸ್‍ನ್ನು ಏರುವ ಮಂದಿ ಸಂಪೂರ್ಣ ಒದ್ದೆಯಾಗಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ ಅವರು, ನಿಲ್ದಾಣದಲ್ಲಿ ಬಸ್ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯ ಅಗತ್ಯವಿದೆ ಎಂದರು.
ನೂತನ ಬಸ್ ನಿಲ್ದಾಣದಲ್ಲಿ ಮಹಿಳೆಯರು ಹಾಗೂ ಪುರುಷರ ಶೌಚಾಲಯಗಳಿರುವ ಪ್ರದೇಶಕ್ಕೆ ತೆರಳಲು ಒಂದೇ ಪ್ರವೇಶ ದ್ವಾರವನ್ನು ವ್ಯವಸ್ಥೆ ಮಾಡಲಾಗಿದೆ. ಇದು ಅತ್ಯಂತ ಮುಜುಗರ ಉಂಟು ಮಾಡುವ ವಿಚಾರವಾಗಿದೆ. ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ವಯರಿಂಗ್, ಪೈಪ್‍ಗಳು ಕಳಪೆಯಾಗಿದೆ. ನಿಲ್ದಾಣದ ಮೇಲ್ಭಾಗದ ಅಂಚಿನಲ್ಲಿ ಅಳವಡಿಸಿರುವ ಸ್ಟೀಲ್‍ನ ತಡೆಯನ್ನು ಸಮರ್ಪಕವಾಗಿ ಅಳವಡಿಸಿಲ್ಲ. ಪ್ರಯಾಣಿಕರು ಇದನ್ನು ಆಧರಿಸಿ ನಿಂತಲ್ಲಿ ಮುರಿದು ಕೆಳಕ್ಕೆ ಬೀಳುವ ಅಪಾಯವಿದೆ, ಅಲ್ಲದೆ ಗ್ರಾನೈಟ್‍ನ್ನು ಕ್ರಮ ಬದ್ಧವಾಗಿ ಅಳವಡಿಸಿಲ್ಲ. ಬಸ್ ನಿಲ್ದಾಣ ಪ್ರವೇಶಿಸುವ ಸ್ಥಳದಲ್ಲಿ ಕಿರುಬೆರಳ ಗಾತ್ರದ ಕಬ್ಬಿಣದ ಸರಳುಗಳನ್ನು ಬಳಸಿ ಕೌಗೇಟ್ ನಿರ್ಮಿಸಲಾಗಿದೆ. ಇದು ಬಸ್‍ನ ಭಾರವನ್ನು ತಡೆಯುವ ಸಾಧ್ಯತೆಗಳು ಕಡಿಮೆ, ಇದರಲ್ಲಿ ಬಸ್‍ಗಳ ಟಯರ್‍ಗಳು ಕುಸಿದು ಸಿಲುಕಿಕೊಳ್ಳುವ ಅಪಾಯವಿದೆ ಎಂದು ಪವನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಪರಿಶೀಲಿಸಿ, ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವ ಜವಬ್ದಾರಿ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಈ ಎಲ್ಲಾ ಅವ್ಯವಸ್ಥೆಗಳ ನಡುವೆ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಮಾರ್ಗದ ವ್ಯವಸ್ಥೆಯೂ ಸೂಕ್ತ ರೀತಿಯಲ್ಲಿಲ್ಲ. ಜ.ತಿಮ್ಮಯ್ಯ ವೃತ್ತದಿಂದ ಬರುವ ಬಸ್‍ಗಳು ಕಾಫಿ ಕೃಪ, ರಾಜಾಸೀಟ್ ಮಾರ್ಗವಾಗಿ ಖಾಸಗಿ ನಿಲ್ದಾಣಕ್ಕೆ ಬರಬೇಕು. ಆದರೆ, ಕಾಫಿ ಕೃಪ ಬಳಿ ಬೆಳಗ್ಗೆ ಮತ್ತು ಸಂಜೆ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಮತ್ತು ರಾಜಾಸೀಟ್ ಬಳಿ ಪ್ರವಾಸಿಗರ ದಂಡೇ ಇರುತ್ತದೆ. ಈ ಮಾರ್ಗದಲ್ಲಿ ಬಸ್ ಸಂಚಾರ ಅಪಾಯಕಾರಿಯಾಗಲಿದೆ. ಇದೇ ರೀತಿ ಖಾಸಗಿ ಬಸ್ ನಿಲ್ದಾಣದಿಂದ ತೆರಳುವ ಬಸ್‍ಗಳು ಅಗಲ ಕಿರಿದಾದ ಎಸ್‍ಬಿಐ ಬಳಿಯ ರಸ್ತೆಯಲ್ಲಿ ಸಂಚರಿಸುವದು ಅತ್ಯಂತ ಕ್ಲಿಷ್ಟಕರವೆಂದು ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟರು.
ಪ್ರಸ್ತುತ ನಿರ್ಮಾಣಗೊಂಡಿರುವ ಬಸ್ ನಿಲ್ದಾಣದ ಜಾಗವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೀಡುವ ಮೂಲಕ ಮೈಸೂರು ರಸ್ತೆಯಲ್ಲಿರುವ ಎಪಿಎಂಸಿ ಜಾಗದಲ್ಲಿ ಹೈಟೆಕ್ ಖಾಸಗಿ ಬಸ್ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸಲಿ ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘÀದ ಅಧ್ಯಕ್ಷ ಪಿ.ಬಿ.ಭರತ್ ಕುಮಾರ್, ಉಪಾಧ್ಯಕ್ಷ ಕೆ.ಕೆ.ವಿಜಯ ಹಾಗೂ ಕಾರ್ಯದರ್ಶಿ ಮಂಜುನಾಥ್ ಕುಮಾರ್ ಉಪಸ್ಥಿತರಿದ್ದರು.