ಶ್ರೀಮಂಗಲ, ಆ. 3: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕಾನೂರು ಕೊಡವ ಸಮಾಜ, ಕೋತೂರು ಅಮ್ಮಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜ ಮತ್ತು ಕಾನೂರು ಗ್ರಾ.ಪಂ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ತಾ. 6ರಂದು ಕಾನೂರಿನ ಮನ್ನಕ್ಕಮನೆ ವಾಸು ನಾಣಮಯ್ಯ ಮತ್ತು ಮನ್ನಕ್ಕಮನೆ ಕಿರಣ್ ಅವರ ಗದ್ದೆಯಲ್ಲಿ ಬೇಲ್ ನಮ್ಮೆ 2018 ಆಚರಿಸಲಾಗುತ್ತಿದೆ. ಇದಕ್ಕೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿವರಿಸಿದ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರು ತಾ. 6ರಂದು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯಾದ ಪಿ.ಐ.ಶ್ರೀವಿದ್ಯಾ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ, ಕೋತೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಕಾನೂರು ಗ್ರಾ.ಪಂ ಅಧ್ಯಕ್ಷೆ ಹೆಮ್ಮಚ್ಚಿಮನೆ ಲತಾ ಗಣೇಶ್ ಭಾಗವಹಿಸಲಿದ್ದು, ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ಎ.ವಿವೇಕ್, ಕಾನೂರು-ಕೋತೂರು ಮಹಿಳಾ ಸಮಾಜದ ಅಧ್ಯಕ್ಷೆ ಚೊಟ್ಟೆಕ್‍ಮಾಡ ಮಾಯಮ್ಮ ಬೋಪಯ್ಯ, ಕೋತೂರು ಕೆಂಬುಟ್ಟಿ ಜನಾಂಗದ ಪ್ರತಿನಿಧಿ ಜೋಕುಟ್ಟಡ ನೀಲ, ಗ್ರಾ.ಪಂ ಸದಸ್ಯ ಹೆಚ್.ಸಿ. ನಂಜುಂಡ ಉಪಸ್ಥಿತರಿರು ವರು ಎಂದು ವಿವರಿಸಿದರು.
“ಬೇಲ್ ಪಣಿ ಅಂದಿಂಜಿಪ್ಪರ” ವಿಚಾರದಲ್ಲಿ ಕೋತೂರು ಕಾವೇರಿ ಅಮ್ಮ ಕೊಡವ ಸಮಾಜದ ಕಾರ್ಯದರ್ಶಿ ಮನ್ನಕ್ಕಮನೆ ಅಶ್ವಿನಿ ನಂದಾ ಅವರಿಂದ ವಿಚಾರ ಮಂಡನೆ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸುಳ್ಳಿಮಾಡ ಬಿ.ತಿಮ್ಮಯ್ಯ, ಮನ್ನಕ್ಕಮನೆ ನಾಣಮಯ್ಯ, ಚೆಪ್ಪುಡೀರ ಪಾರ್ವತಿ ಪೊನ್ನಪ್ಪ, ಹೆಮ್ಮಚ್ಚಿಮನೆ ಜಿ.ವಿಠಲ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವದೆಂದು ಮಾಹಿತಿ ನೀಡಿದರು.
ಮಧ್ಯಾಹ್ನ 1.30ಕ್ಕೆ ಸಾಂಪ್ರದಾಯಿಕ ನಾಟಿ ಊಟ ಇರುತ್ತದೆ. ಈ ಸಂದರ್ಭ ಮುಖ್ಯವಾಗಿ ವಿವಿಧ ಪೈಪೋಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ಮಹಿಳೆಯರಿಗೆ ಪೈರು ಕೀಳುವದು ಹಾಗೂ ಪುರುಷರಿಗೆ ನಾಟಿ ನೆಡುವ ಪೈಪೋಟಿ ಇರುತ್ತದೆ. ಈ ಎಲ್ಲಾ ವಿಭಾಗಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ನಾಟಿ ಓಟ ಸ್ಪರ್ಧೆ ಇರುತ್ತದೆ. ಸಾರ್ವಜನಿಕ ಪುರುಷರಿಗೆ ಕೊಡಿ ನಾಟಿ (ದಾರೆ ನಾಟಿ) ಪೈಪೋಟಿ, ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಸಾರ್ವಜನಿಕ ಪುರುಷರಿಗೆ ಪೈರು ಹಿಡಿಯನ್ನು ಎಸೆಯುವ ಪೈಪೋಟಿ ಅಲ್ಲದೆ, ಪ್ರಾಥಮಿಕ, ಪ್ರೌಢಶಾಲೆಯ ಬಾಲಕರಿಗೆ (ಜೋಡಿ) ಅಡಿಕೆ ಹಾಳೆಯಲ್ಲಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು. ಸಮಾರೋಪ ಸಮಾರಂಭ 3 ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಣ್ಣೇಕರ್, ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಉಪಸ್ಥಿತರಿರುವರು. ಇದೇ ಸಂದರ್ಭ ಉರ್‍ಟಿಕೊಟ್ಟ್ ಆಟ್, ಓಯ್ಯಪಾಟ್, ವಾಲಗತಾಟ್, ಸಾಂಸ್ಕøತಿಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಅಕಾಡೆಮಿ ಸದಸ್ಯರುಗಳಾದ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಚಂಗುಲಂಡ ಸೂರಜ್, ಮನ್ನಕ್ಕಮನೆ ಬಾಲಕೃಷ್ಣ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಕಾನೂರು ಪಿ.ಎ.ಸಿ.ಎಸ್ ಅಧ್ಯಕ್ಷ ಅಳಮೇಂಗಡ ವಿವೇಕ್, ಕಾನೂರು ಕೊಡವ ಸಮಾಜದ ಖಜಾಂಚಿ ಸುಳ್ಳಿಮಾಡ ದಿನು ಚಿಣ್ಣಪ್ಪ, ಕೋತೂರು ಅಮ್ಮಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಸದಸ್ಯ ಮನ್ನಕ್ಕಮನೆ ರವಿ, ಕೋತೂರು ಊರು ತಕ್ಕರಾದ ಮನ್ನಕ್ಕಮನೆ ಈಶ್ವರ, ಅವರು ಹಾಜರಿದ್ದರು.