“ ಬಿಸಿಯೂಟದ ಸಾಮಗ್ರಿ ವಿತರಣೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ. ಸಾಮಗ್ರಿ ಪೂರೈಕೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಕಳಪೆ ಆಹಾರ ಸಾಮಗ್ರಿಗಳ ವಿತರಣೆಯಿಂದ ಮಕ್ಕಳು ಅಸ್ವಸ್ಥರಾಗಿ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅವ್ಯವಹಾರದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಭಾಗಿಯಾಗಿರುವ ಶಂಕೆ ಇದೆ.”

-ಕಿರಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಪೋಕ್ಲು, ಆ. 2: ಶಾಲೆಗೆ ಕಳಪೆ ಗುಣಮಟ್ಟದ ಬಿಸಿಯೂಟ ಸಾಮಗ್ರಿ ವಿತರಣೆ ಯಾಗುತ್ತಿದೆ ಎಂದು ಆರೋಪಿಸಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರೊಬ್ಬರು ರಾಜೀ ನಾಮೆ ನೀಡಿದ ಘಟನೆ ಸಮೀಪದ ಪಾಲೂರು ಗ್ರಾಮದಲ್ಲಿ ತಾ 31 ರಂದು ನಡೆದಿದೆ. ಪಾಲೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಒಂದರಿಂದ ಏಳರವರೆಗೆ ತರಗತಿಗಳನ್ನು ಹೊಂದಿದ್ದು ಉತ್ತಮ ಶಾಲಾ ಕಟ್ಟಡದ ವ್ಯವಸ್ಥೆ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಮೂವರು ಶಿಕ್ಷಕರು ಮಕ್ಕಳಿಗೆ ಅಡುಗೆ ಮಾಡಲು ಓರ್ವ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರಾಮದ ಬಡಕೂಲಿ ಕಾರ್ಮಿಕರ ಹದಿನೆಂಟು ಮಕ್ಕಳು ಇಲ್ಲಿ ಓದುತ್ತಿದ್ದು, ಈ ಶಾಲೆಗೆ ಸರ್ಕಾರದಿಂದ ಪೂರೈಕೆಯಾಗುತ್ತಿರುವ ಧವಸಧಾನ್ಯಗಳು ಕಸಕಡ್ಡಿ ಹುಳಹುಪ್ಪಟೆಗಳಿಂದ ಕೂಡಿ ತೀರ ಕಳಪೆಯಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕಿರಣ ಈ ಹಿಂದೆ ಹಲವು ಬಾರಿ ಆರೋಪಿಸಿದ್ದರು. ಕಳಪೆ ಧವಸ ಧಾನ್ಯಗಳಿಂದ ತಯಾರಿಸಿ ಅಡುಗೆ ಊಟ ಮಾಡಲು ಯೋಗ್ಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಬೇಳೆಕಾಳು ಪರಿಶೀಲಿಸಿ ಹಾಳಾಗಿರುವ ಬಗ್ಗೆ ಶಿಕ್ಷಕರೊಂದಿಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ ಶಾಲೆಗೆ ಉದಾರವಾಗಿ ನೀಡಿದ ಟಿ.ವಿ. ಮತ್ತು ಡಿವಿಡಿ ಬಳಕೆಯಾಗದೆ ಮೂಲೆಗುಂಪಾಗಿದೆ ಎಂದು ಅವರು ಪತ್ರಿಕೆಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ದುಗ್ಗಳ ಸದಾನಂದ