ಮಡಿಕೇರಿ, ಆ. 2: ಕೇಂದ್ರ ಸರಕಾರದ ಕೃಷಿ ನೀತಿ ಆಧರಿಸಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ‘ಸಮೇತಿ’ ವಿಭಾಗವು ಒಂದು ವರುಷದ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿತರಣಾ ಸೇವೆಯ ಡಿಪ್ಲೋಮಾ ಪರೀಕ್ಷೆ ನಡೆಸಿದ್ದು, ಜಿಲ್ಲೆಯ ಹದಿನೆಂಟು ವಿತರಕರು ಡಿಸ್ಟಿಂಕ್ಷನ್‍ನಲ್ಲಿ ಹಾಗೂ ಹತ್ತೊಂಭತ್ತು ವಿತರಕರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಂಯೋಜಕ ಪ್ರಭಾಕರ್ ತಿಳಿಸಿದ್ದಾರೆ.ಮಡಿಕೇರಿ ಟಾಟಾ ಸಂಸ್ಥೆಯ ತೋಟಗಾರಿಕಾ ವಿತರಣಾ ವಿಭಾಗದ ಮುಖ್ಯಸ್ಥೆ ಎಂ.ಇ. ಕೃಪಾ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ವೀರಾಜಪೇಟೆ ಟಾಟಾ ಸಂಸ್ಥೆಯ ತೋಟಗಾರಿಕಾ ವಿತರಣಾ ವಿಭಾಗದ ಎಂ.ಪಿ. ಪೆಮ್ಮಯ್ಯ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. (ಮೊದಲ ಪುಟದಿಂದ) ಟಾಟಾ ಕಾಫಿಯ ಸ್ವದೀಪ್ ಸುಬ್ಬಯ್ಯ ಹಾಗೂ ಕೊಡ್ಲಿಪೇಟೆ ದರ್ಶನ್, ಆಗ್ರೋ ಸೆಂಟರಿನ ರಂಗನಾಥ್ ಮೂರನೇ ರ್ಯಾಂಕ್ ಹಂಚಿಕೊಂಡಿದ್ದಾರೆ.
ಕೇಂದ್ರ ಸರಕಾರದ ಹೊಸ ನೀತಿಯಂತೆ ಕೃಷಿ ಪರಿಕರ ವಿತರಣೆಗಾರರು ಖಡ್ಡಾಯವಾಗಿ ಪದವಿ ಅಥವಾ ಬಿ.ಎಸ್ಸಿ (ಡಿಗ್ರಿ) ಮಾಡಿರಬೇಕು. ಇದಲ್ಲದೆ ಹಿಂದಿನಿಂದಲೇ ವಿತರಣೆ ಮಾಡುತ್ತಿರುವವರು ಖಡ್ಡಾಯವಾಗಿ ದೇಶೀ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಬೇಕು. ಈ ನಿಟ್ಟಿನಲ್ಲಿ ಹೈದ್ರಾಬಾದಿನ ನೆನೇಜ್ ಸಂಸ್ಥೆಯ ವಿಶೇಷ ತರಬೇತಿಯಲ್ಲಿ ಪ್ರತಿ ಶನಿವಾರ ಒಂದು ವರ್ಷ ಕಾಲ ಭೋದನೆ, ಕ್ಷೇತ್ರ ದರ್ಶನ ಪರೀಕ್ಷೆಗಳು ನಡೆದಿವೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರವು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರಭಾಕರ್ ‘ಶಕ್ತಿ’ಗೆ ತಿಳಿಸಿದರು.
ತಾ. 4ರಂದು ಪದವಿ ಸಮಾರಂಭ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ರಾಜ್ಯ ನೋಡಲ್ ಅಧಿಕಾರಿ ಡಾ|| ಪೆನ್ನೊಬಲಿಸ್ವಾಮಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶಿವಕುಮಾರ್, ಬೆಂಗಳೂರು ಐ.ಸಿ.ಎ.ಆರ್., ಐ.ಸಿ.ಎಚ್.ಆರ್. ಸಂಸ್ಥೆಗಳ ನಿರ್ದೇಶಕ ಡಾ|| ಎಂ.ಆರ್. ದಿನೇಶ್ ಹಾಗೂ ಇತರರು ಭಾಗವಹಿಸುವರು.