ಮಡಿಕೇರಿ, ಆ. 2: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಅವಘಡಕ್ಕೀಡಾಗಿ ಬೈಕ್ನ ಹಿಂಬದಿ ಕುಳಿತಿದ್ದ ಯುವತಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಂಭವಿಸಿದೆ.ಹೇರೂರು ಗ್ರಾಮದ ಮಲ್ಲೇಶ್ ಎಂಬವರ ಪುತ್ರಿ ಭವ್ಯ (26) ಎಂಬಾಕೆಯೇ ಸಾವಿಗೀಡಾದ ದುರ್ದೈವಿ. ಭವ್ಯ ಇಂದು ತನ್ನ ಸ್ನೇಹಿತ ಸೋಮವಾರಪೇಟೆಯ ನವೀನ್ ಕುಮಾರ್ ಎಂಬಾತ ನೊಂದಿಗೆ ಅಪಾಚಿ ಬೈಕ್ (ಕೆ.ಎ. 12 ಆರ್. 2092)ನಲ್ಲಿ ಅಬ್ಬಿಜಲಪಾತ ಕ್ಕೆಂದು ತೆರಳುತ್ತಿದ್ದಾಗ ಆರ್ಟಿಓ ಕಚೇರಿಗಿಂತ ಮುಂದೆ ಅನತಿ ದೂರದಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಅವಘಡ ಕ್ಕೀಡಾಗಿದೆ. ಪರಿಣಾಮ ಹಿಂಬದಿ ಕುಳಿತಿದ್ದ ಭವ್ಯ ನೆಲಕ್ಕುರುಳಿದ್ದು, ಈ ಸಂದರ್ಭ ಆಕೆಯ ತಲೆಯ ಹಿಂಭಾಗ ನೆಲಕ್ಕೆ ಬಡಿದಿದೆ. ಗಂಭೀರ ಗಾಯಗೊಂಡ ಭವ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೀನ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.