ಸಿದ್ದಾಪುರ, ಆ. 2: ಗುಹ್ಯ ಗ್ರಾಮದ ಕೂಡುಗದ್ದೆಯ ವಿಭಾಗಕ್ಕೆ ಕಳೆದ ಒಂದು ತಿಂಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲವೆಂದು ಆರೋಪಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಮುಖಂಡ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ಜೀವನದಿ ಕಾವೇರಿ ಹರಿಯುವ ನದಿಯ ಸಮೀಪದಲ್ಲೇ ವಾಸ ಮಾಡಿಕೊಂಡಿರುವ ನಿವಾಸಿಗಳಿಗೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವದು ಖಂಡನೀಯ ಎಂದರು.

ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಗುಹ್ಯ ಗ್ರಾಮದಿಂದ 9 ಮಂದಿ ಸದಸ್ಯರುಗಳು ಆಯ್ಕೆಯಾಗಿದ್ದಾರೆ. ಆದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಕೂಡ ಯಾರೊಬ್ಬರೂ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದಿರುವದು ವಿಷಾದನೀಯ ಎಂದರು. ಸಿಪಿಐ(ಎಂ) ಮುಖಂಡ ಹೆಚ್. ಬಿ. ರಮೇಶ್ ಮಾತನಾಡಿ ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ನಿರಂತರ ಹೋರಾಟ ನಡೆಸಲಾಗುವದೆಂದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಮುಖಂಡರುಗಳಾದ ಎನ್. ಕೆ. ಅನಿಲ್, ಮುಸ್ತಾಫ, ಪವಿತ್ರ ಹಾಗೂ ಗ್ರಾಮಸ್ಥರು ಹಾಜರಿದ್ದರು. ನಂತರ ಗ್ರಾ.ಪಂ. ಅಧ್ಯಕ್ಷ ಮಣಿ ಅವರಿಗೆ ಮನವಿ ಪತ್ರ ನೀಡಿದರು.