ವೀರಾಜಪೇಟೆ, ಜು. 28: ವೀರಾಜಪೇಟೆ ವಿಭಾಗಕ್ಕೆ ಈಚೆಗೆ ಸುರಿದ ಭಾರೀ ಮಳೆಯಿಂದ ಪಟ್ಟಣ ಪಂಚಾಯಿತಿಯ ಎಲ್ಲ ರಸ್ತೆಗಳು ಹಾನಿಗೊಳಗಾಗಿದ್ದು, ಮಳೆ ಮುಕ್ತಾಯಗೊಂಡ ತಕ್ಷಣ ರೂ. 32 ಲಕ್ಷದಲ್ಲಿ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಪಡಿಸಿ, ವಿವಿಧ ವಾರ್ಡ್‍ಗಳಲ್ಲಿ ಜನಪರ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರೀ ಮಳೆಯಿಂದ ಪಟ್ಟಣ ಪಂಚಾಯಿತಿಗೆ ಈ ತನಕ ರೂ. 50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ್ದು, ಮಳೆ ಹಾನಿ ಪರಿಹಾರ ಬಂದ ತಕ್ಷಣ ಇತರ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.
ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶೌಚಾಲಯಗಳೆಲ್ಲ ಗಬ್ಬೆದ್ದು ನಾರುತ್ತಿದ್ದು ತಕ್ಷಣ ಶುಚಿಗೊಳಿಸಿ ನಿರಂತರ ನೀರು ಪೊರೈಕೆ ಕಲ್ಪಿಸುವಂತೆ ಒತ್ತಾಯಿಸಿದರು. ಹಿರಿಯ ಸದಸ್ಯ ಎಸ್.ಎಚ್. ಮೊೈನುದ್ದೀನ್ ಮಾತನಾಡಿ, ಜನತಾದಳ ಸಮ್ಮಿಶ್ರ ಸರಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗಾಗಿ ರಾಜಕೀಯ ರಹಿತವಾಗಿ (ಮೊದಲ ಪುಟದಿಂದ) ರೂ.10 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಹಣ ಮಂಜೂರಾತಿಯಾಗಿ ಬಿಡುಗಡೆ ಗೊಳ್ಳಲಿದೆ ಎಂದರು.
ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಅನುದಾನವಿಲ್ಲದೆ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದ್ದು, ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡಿದ್ದಾಗ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಅವರಿಗೆ ಖುದ್ದು ಮನವರಿಕೆ ಮಾಡಲಾಗಿದ್ದು, ಪ್ರಥಮ ಹಂತದಲ್ಲಿ ತಕ್ಷಣ ರೂ. 5 ಕೋಟಿ ಬಿಡುಗಡೆ ಮಾಡುವದಾಗಿ ಆಶ್ವಾಸನೆ ನೀಡಿದ್ದು, ಅನುದಾನದ ಪ್ರಕ್ರಿಯೆ ಮುಂದುವರೆದಿರುವದಾಗಿ ಸಭೆಗೆ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಮಾತನಾಡಿ, ವೀರಾಜಪೇಟೆ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಬಗ್ಗೆ ನಿರ್ಲಕ್ಷ್ಯ ತಾಳಿದೆ. ವ್ಯವಸ್ಥಿತವಾಗಿ ರಸ್ತೆಗೆ ಚರಂಡಿ ಇಲ್ಲದಿರುವದರಿಂದ ಮಳೆಯ ಪ್ರಯುಕ್ತ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದೆ. ಈ ಇಲಾಖೆಯನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ದೂರಿದರು.
ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಅಧಿಕಾರಿಗಳು ಪಟ್ಟಣದಲ್ಲಿ ಏಕ ಮುಖ ಸಂಚಾರದ ವ್ಯವಸ್ಥೆಗೊಳಿಸುವಾಗ ಪಟ್ಟಣ ಪಂಚಾಯಿತಿಯ ಆಡಳಿತವನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳ ಇಚ್ಛಾನುಸಾರವಾಗಿ ಏಕ ಮುಖ ಸಂಚಾರವನ್ನು ಗೊತ್ತುಪಡಿಸಲಾಗುತ್ತಿದೆ. ಸಾರ್ವಜನಿಕ ಪ್ರಮುಖರು ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರುಗಳು, ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ರಚನ್ ಮೇದಪ್ಪ ಸಭೆಗೆ ತಿಳಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು.
ಮುಖ್ಯಾಧಿಕಾರಿ ಎನ್.ಪಿ.ಹೇಮ್‍ಕುಮಾರ್ ಮಾತನಾಡಿ, ಹಿಂದಿನ ಸರಕಾರದಿಂದ ರೂ. ಒಂದು ಕೋಟಿ ಎಪ್ಪತ್ತುಲಕ್ಷ ಅನುದಾನ ಬಂದಿದ್ದು, ಈ ಪೈಕಿ ರಸ್ತೆ ಅಭಿವೃದ್ಧಿಗಾಗಿ ರೂ. ಒಂದು ಕೋಟಿ ಹತ್ತುಲಕ್ಷಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಉಳಿದ ಹಣ ರೂ. 60 ಲಕ್ಷ ಹಣವನ್ನು ಕುಡಿಯುವ ನೀರಿನ ಯೋಜನೆಗೆ ಬಳಸಲಾಗುವದು ಎಂದರು.
ಕಾಂಗ್ರೆಸ್ ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ, ಪಟ್ಟಣ ಪಂಚಾಯಿತಿಯ ಬಿ.ಜೆ.ಪಿ. ಆಡಳಿತದಲ್ಲಿ ಕಾಲಹರಣ ಮಾಡುವದು ಬಿಟ್ಟರೆ ಯಾವದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಈಗಿನ ಆಡಳಿತದ ಅವಧಿ ಮಾತ್ರ ಮುಗಿದಿದ್ದು, ಇದರಲ್ಲಿಯೇ ಸದಸ್ಯರುಗಳು ತೃಪ್ತಿಪಟ್ಟುಕೊಳ್ಳಬೇಕಿದೆ. ಜೇಸಿಬಿ ಹಾಗೂ ಟ್ರ್ಯಾಕ್ಟರ್ ವಾಹನಗಳ ಟಯರುಗಳನ್ನು ಗೋಣಿಕೊಪ್ಪದಲ್ಲಿ ರೀಟ್ರೇಡಿಂಗ್ ಮಾಡಿರುವ ಪ್ರಕರಣವನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಶೀಬಾ ಪೃಥ್ವಿನಾಥ್ ಅವರ ಹೇಳಿಕೆಯಿಂದ ಕುಪಿತಗೊಂಡ ಇ.ಸಿ.ಜೀವನ್ ನಿಮ್ಮದೇ ಕಾಂಗ್ರೆಸ್ ಸರಕಾರ, ಕಿಂಚಿತ್ತು ಅನುದಾನ ನೀಡಲಿಲ್ಲ, ಅನುದಾನ ನೀಡುತ್ತೇವೆ ಎಂದು ಹೇಳಿ ನುಣುಚಿಕೊಂಡಿದೆ ಎಂದು ಟೀಕಿಸಿದರು. ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು 60 ಎಚ್.ಪಿ. ಮೋಟಾರ್ ಖರೀದಿಸಿದ್ದು, ಮುಂದಿನವಾರ ಇದಕ್ಕೆ ಚಾಲನೆ ನೀಡಲಾಗುವದು. ಹೊಸ ರಸ್ತೆ, ರಸ್ತೆ ದುರಸ್ತಿಗೂ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಮೂರ್ನಾಡು ರಸ್ತೆಯಲ್ಲಿ ಚಿಕ್ಕಪೇಟೆ ಜಂಕ್ಷನ್‍ವರೆಗಿನ ರಸ್ತೆಗೆ ದಿ. ಡಾ. ಎಂ.ಎಂ. ಚಂಗಪ್ಪ ಅವರ ಹೆಸರನ್ನು ನಾಮಕರಣ ಮಾಡಲು ಸಭೆ ತೀರ್ಮಾನಿಸಿತು.
ಚರ್ಚೆಯಲ್ಲಿ ಕೆ.ಸಚಿನ್, ಟಿ.ಜೆ.ಶಂಕರ್ ಶೆಟ್ಟಿ, ಕೆ.ಎನ್.ವಿಶ್ವನಾಥ್ ಭಾಗವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂಅಕ್ತರ್ ಹಾಗೂ 16 ಮಂದಿ ಸದಸ್ಯರುಗಳು ಹಾಜರಿದ್ದರು.