ವೀರಾಜಪೇಟೆ, ಜು. 28: ವೀರಾಜಪೇಟೆ ಪಟ್ಟಣ ಪಂಚಾಯಿತಿ ಶುಚಿತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಶುಚಿತ್ವದಲ್ಲಿ ತೊಡಗಿರುವ ಪೌರಸೇವಾ ನೌಕರರಿಗೆ ಮಳೆ-ಗಾಳಿಯಿಂದ ರಕ್ಷಿಸಿಕೊಳ್ಳಲು ಸುರಕ್ಷಾ ಕವಚದ ಕಿಟ್‍ನ್ನು ವಿತರಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೀವನ್ ಅವರು, ಪಟ್ಟಣದಲ್ಲಿ ಶುಚಿತ್ವದಲ್ಲಿ ತೊಡಗಿರುವ ನೌಕರರ ಸೇವೆ ಮಹತ್ವದಿಂದ ಕೂಡಿದೆ. ಅವರಿಗೂ ಕರ್ತವ್ಯದಲ್ಲಿ ನಿಷ್ಠೆ ಇದೆ. ಅವರ ಸೇವೆಗೆ ಮೂಲ ಸೌಲಭ್ಯಗಳನ್ನು ಪಟ್ಟಣ ಪಂಚಾಯಿತಿ ಆದ್ಯತೆ ಮೇರೆ ಒದಗಿಸಬೇಕು ಎಂದರು.

ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಮಾತನಾಡಿ, ಪಟ್ಟಣದ ಶುಚಿತ್ವಕ್ಕೆ ಪಟ್ಟಣ ಪಂಚಾಯಿತಿ ನಾಲ್ಕನೇ ದರ್ಜೆ ನೌಕರರ ಸೇವೆ ಅವಲಂಭಿತವಾಗಿದೆ. ನೌಕರರಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವದು ನ್ಯಾಯ ಸಮ್ಮತವಾಗಿದೆ ಎಂದು ಹೇಳಿದರು.

ಅತಿಥಿಗಳಾಗಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಹಿರಿಯ ಸದಸ್ಯ ಎಸ್.ಹೆಚ್. ಮೈನುದ್ದೀನ್, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.