ಸಿದ್ದಾಪುರ, ಏ. 28: ಈ ಬಾರಿಯ ಮುಂಗಾರು ಮಳೆಯಿಂದಾಗಿ ಭತ್ತದ ಕೃಷಿಕರ ಮುಖದಲ್ಲಿ ಮಂದಹಾಸ ಬೀರಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಸಿದ್ದಾಪುರ ಸಮೀಪದ ಅವರೆಗುಂದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯನ್ನು ಲೆಕ್ಕಿಸದೇ ಗದ್ದೆಯಲ್ಲಿ ಭತ್ತದ ಕೃಷಿ ಚಟುವಟಿಕೆಯಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರೆಗುಂದ ನಿವಾಸಿ ಗಿರೀಶ್ ರೈ ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆಯು ನಿರೀಕ್ಷಿತ ಮಟ್ಟದಲ್ಲಿ ಬಾರದೇ ಗದ್ದೆಗಳಲ್ಲಿ ನೀರು ಕಡಿಮೆ ಇದ್ದ ಕಾರಣ ಬಹುತೇಕ ಮಂದಿ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಈ ಭಾಗದ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಭತ್ತದ ಕೃಷಿ ಚಟುವಟಿಕೆ ಮಾಡಲು ಅನುಕೂಲ ವಾಗಿದೆ ಎಂದು ತಿಳಿಸಿದರು.

ಕಾಡಾನೆಗಳ ಹಾವಳಿ ಇದ್ದರೂ ಕೂಡ ರಾತ್ರಿ ಸಮಯದಲ್ಲಿ ಕಾಡಾನೆಗಳು ಗದ್ದೆಗೆ ಲಗ್ಗೆ ಇಡದಂತೆ ಗದ್ದೆ ಬಳಿ ಅಟ್ಟಣಿ ನಿರ್ಮಿಸಿಕೊಂಡು ಅದರಲ್ಲಿ ಕುಳಿತುಕೊಂಡು ಟಿನ್ ಡಬ್ಬಗಳನ್ನು ಬಡಿದು ಶಬ್ಧ ಮಾಡುವ ಮೂಲಕ ಕಾಡಾನೆಗಳಿಂದ ಕೃಷಿಯನ್ನು ರಕ್ಷಿಸುತ್ತಿದ್ದೇವೆ ಎಂದು ಗಿರೀಶ್ ‘ಶಕ್ತಿ’ಗೆ ತಿಳಿಸಿದರು.

-ವಾಸು