ಕರಿಕೆ, ಜು. 28: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಭಾಗಮಂಡಲ-ಕರಿಕೆ ಅಂತರರಾಜ್ಯ ಹೆದ್ದಾರಿಯ ರಸ್ತೆ ಬದಿ ಕಾಡು ಕಡಿದು ಚರಂಡಿ ದುರಸ್ತಿ ಮಾಡಿ ರಸ್ತೆ ಬದಿ ಮಣ್ಣು ತೆರವುಗೊಳಿಸುವ ಕಾಮಗಾರಿ ಕಳಪೆಯಾಗಿದೆ ಎಂದು ಕರಿಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಗಮಂಡಲ ಮೂಲದ ಗುತ್ತಿಗೆದಾರರೊಬ್ಬರು ಎಂಟು ಲಕ್ಷ ರೂ.ಗಳಿಗೆ ಈ ಕಾಮಗಾರಿಯನ್ನು 2018-19ನೇ ಸಾಲಿಗೆ ಗುತ್ತಿಗೆ ಪಡೆದಿದ್ದು ರಸ್ತೆ ಬದಿ ಎರಡು ಅಡಿ ಮಾತ್ರ ಕಾಡು ಕಡಿದು ಚರಂಡಿಗೆ ಹಾಕುತ್ತಿದ್ದು ಇತ್ತೀಚೆಗೆ ಕರಿಕೆ ಗ್ರಾಮ ಪಂಚಾಯತಿ ತನ್ನ ಖರ್ಚಿನಲ್ಲಿ ಜೆಸಿಬಿ ಯಂತ್ರ ಬಳಸಿ ಚರಂಡಿ ದುರಸ್ತಿ ಗೊಳಿಸಿದ್ದು, ಇದೀಗ ಚರಂಡಿಯಲ್ಲಿ ಕಾಡು ತುಂಬಿದ ಪರಿಣಾಮ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇಲಾಖೆಯ ಯಾವೊಬ್ಬ ಅಧಿಕಾರಿಗಳೂ ಇತ್ತ ಸುಳಿದಿಲ್ಲ. ಆದ್ದರಿಂದ ಕೂಡಲೇ ಲೋಕೋಪಯೋಗಿ ಇಲಾಖೆ ಈ ಕಳಪೆ ಕಾಮಗಾರಿ ಬಗ್ಗೆ ಎಚ್ಚೆತ್ತುಕೊಂಡು ಗುತ್ತಿಗೆದಾರನಿಗೆ ಸರಿಯಾಗಿ ಕಾಮಗಾರಿ ನಿರ್ವಹಣೆ ಮಾಡಲು ಸೂಚಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವದಾಗಿ ಗ್ರಾಮಸ್ಥರು ಎಚ್ಚರಿಕೆಯಿತ್ತಿದ್ದಾರೆ.