ಕುಶಾಲನಗರ, ಜು. 28: ಪಟ್ಟಣದ ಶುಚಿತ್ವವನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಕುಶಾಲನಗರ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಹೇಳಿದರು.

ಕುಶಾಲನಗರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ನಡೆದ 83ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕ ಹೆಚ್.ಆರ್. ರಂಗಸ್ವಾಮಿ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ದಿನನಿತ್ಯ ನಗರದ ವಿವಿಧ ಬಡಾವಣೆಗಳ ಸ್ವಚ್ಛತೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪೌರಕಾರ್ಮಿಕರ ಸೇವೆ ಮಹತ್ವದ್ದಾಗಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರು ತಮ್ಮ ಜವಬ್ದಾರಿ ನಿಭಾಯಿಸಬೇಕಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹಗಲಿರುಳು ಎನ್ನದೆ ದುಡಿಯುವ ಶ್ರಮಿಕ ವರ್ಗದವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಸರಕಾರ ಮುಂದಾಗಬೇಕಿದೆ ಎಂದರು.

ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸರಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದಲ್ಲಿ ಜನರು ಪ್ರಮುಖ ಪಾತ್ರ ವಹಿಸಬೇಕು ಎಂದರು.

ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಬಿ. ಜೋಯಪ್ಪ, ಪಂಚಾಯಿತಿ ಅಧಿಕಾರಿ ಸತೀಶ್, ದೇವಾಲಯ ಒಕ್ಕೂಟ ಸಮಿತಿಯ ಪ್ರಮುಖರಾದ ಎಸ್.ಕೆ. ಶ್ರೀನಿವಾಸರಾವ್, ಕೆ.ಆರ್. ಶಿವಾನಂದ್, ಸುಬ್ಬಯ್ಯ ಮಾತನಾಡಿದರು. ಅರ್ಚಕ ಕೃಷ್ಣಮೂರ್ತಿ ಭಟ್ ಅಷ್ಟೋತ್ತರ, ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸ್ವಚ್ಛತಾ ಆಂದೋಲನ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ವನಿತಾ ಚಂದ್ರಮೋಹನ್, ಎಂ.ಡಿ. ಕೃಷ್ಣಪ್ಪ, ಕೆ.ಎನ್. ದೇವರಾಜ್, ಬಿ.ಜೆ. ಅಣ್ಣಯ್ಯ, ಕೃಷ್ಣ, ದಫೇದಾರ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮಿ, ಯಶೋಧ, ಪೌರಕಾರ್ಮಿಕರು ಮತ್ತು ಬಳಗದ ಸದಸ್ಯರು ಇದ್ದರು.

ಕುಶಾಲನಗರ ಕೊಪ್ಪ ಸೇತುವೆ ಬಳಿ ಕಾವೇರಿ ಮಾತೆ ಪ್ರತಿಮೆಗೆ ಅಭಿಷೇಕ, ಆರತಿ ಪೂಜಾ ಕಾರ್ಯಕ್ರಮಗಳು ನಡೆದವು. ಚಂದ್ರಗ್ರಹಣ ಹಿನ್ನೆಲೆ ರಾತ್ರಿ ವೇಳೆ ನಡೆಸುತ್ತಿದ್ದ ಕಾರ್ಯಕ್ರಮವನ್ನು ಬೆಳಿಗ್ಗೆ ನೆರವೇರಿಸಲಾಯಿತು. ಈ ಸಂದರ್ಭ ಬಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.