ಮಡಿಕೇರಿ, ಜು. 16: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಜತೆಗೂಡಿ ತಾ. 19ರಂದು ಜಿಲ್ಲೆಗೆ ಆಗಮಿಸುವ ನಿಟ್ಟಿನಲ್ಲಿ ವ್ಯಾಪಕ ಸಿದ್ಧತೆ ನಡೆದಿದೆ. ಜಿಲ್ಲಾಡಳಿತದಿಂದ ಮುಖ್ಯಮಂತ್ರಿಗಳಿಗೆ ಕೊಡಗಿನ ಅತಿವೃಷ್ಟಿ ಸಂಬಂಧ ವರದಿ ಸಲ್ಲಿಸಲು ಮಾಹಿತಿ ರೂಪಿಸಲಾಗುತ್ತಿದೆ.ಇನ್ನೊಂದೆಡೆ ಕುಮಾರಸ್ವಾಮಿ ದಂಪತಿ ಹಾರಂಗಿ ಜಲಾಶಯದ ಅತಿಥಿ ಗೃಹದಲ್ಲಿ ತಂಗಲಿರುವ ಸಾಧ್ಯತೆ ಮೇರೆಗೆ ಅಲ್ಲಿನ ಜಲಾನಯನ ಇಲಾಖೆ ಅಧಿಕಾರಿಗಳು ಚಳಿ ಬಿಟ್ಟು ಅತಿಥಿಗೃಹವನ್ನು ಸಿಂಗಾರಗೊಳಿಸಲು ಮುಂದಾಗಿದ್ದಾರೆ.(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಹಾರಂಗಿ ಜಲಾಶಯದ ತಟದಲ್ಲಿರುವ ಅತಿಥಿಗೃಹಕ್ಕೆ ಕಾಯಕಲ್ಪ ನೀಡಲಾಗುತ್ತಿದೆ. ಇಡೀ ಕಟ್ಟಡಕ್ಕೆ ಬಣ್ಣ ಬಳಿದು ಗೋಡೆಗಳು, ಕಿಟಕಿ, ಬಾಗಿಲುಗಳು, ಮೆಟ್ಟಿಲುಗಳ ಸಹಿತ ಶುಭ್ರಗೊಳಿಸುವ ಕೆಲಸ ಭರದಿಂದ ಸಾಗಿದೆ. ಮಾತ್ರವಲ್ಲದೆ, ಅತಿಥಿಗೃಹಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಐಷಾರಾಮಿ ವ್ಯವಸ್ಥೆಯಲ್ಲಿ ರೂಪುಗೊಳಿಸಲಾಗುತ್ತಿದೆ.

ಇಡೀ ಕಟ್ಟಡವನ್ನು ನವೀಕರಿಸುವ ಮುಖಾಂತರ ಎಲ್ಲ ಕಿಟಕಿ ಬಾಗಿಲುಗಳಿಗೆ ಹೊಸ ಸ್ಕ್ರೀನ್‍ಗಳು, ಕಾರ್ಪೆಟ್‍ಗಳು, ಪೀಠೋಪಕರಣ ಸಹಿತ ನವವಧುವಿನಂತೆ ಸಿಂಗರಿಸಲಾಗುತ್ತಿದೆ.ಅತಿಥಿಗೃಹದ ಕೋಣೆಗಳಿಗೆ ಬೇಕಾಗುವ ಹಾಸಿಗೆ, ದಿಂಬು, ಹೊದಿಕೆ ಸಹಿತ ಮಳೆಯಲ್ಲಿ ಹಾರಂಗಿ ಜಲಾಶಯ ವೀಕ್ಷಿಸಲು ಕೊಡೆಗಳನ್ನು ಕೂಡ ಅಧಿಕಾರಿಗಳು ಹೊಂದಿಸಿ ಇರಿಸಿಕೊಳ್ಳ ತೊಡಗಿದ್ದಾರೆ. ಈಗಿನ ಪ್ರಕಾರ ತಾ. 19ರಂದು ಮುಖ್ಯಮಂತ್ರಿಗಳು ತಮ್ಮ ಪತ್ನಿ ಸಮೇತ ಹಾರಂಗಿ ಅತಿಥಿ ಗೃಹದಲ್ಲಿ ಭೇಟಿ ನೀಡಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ತಾ. 20 ರಂದು ತಲಕಾವೇರಿ - ಭಾಗಮಂಡಲಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಮಡಿಕೇರಿ ಹೊರವಲಯದ ಖಾಸಗಿ ರೆಸಾರ್ಟ್‍ವೊಂದರಲ್ಲಿ ರಾತ್ರಿ ತಂಗುವದರೊಂದಿಗೆ, ತಾ. 20ರಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಅನಂತರ ಮೈಸೂರಿನತ್ತ ಪ್ರಯಾಣಿಸಲಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಕೊಡಗು ಪ್ರವಾಸ ಹಿನ್ನೆಲೆ ಹಾರಂಗಿ ಜಲಾಶಯ ತಟದ ಅತಿಥಿಗೃಹಕ್ಕೆ ಕಾಯಕಲ್ಪದೊಂದಿಗೆ ಇಡೀ ಪರಿಸರ ಕಾಡು-ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ.