ಮಡಿಕೇರಿ, ಜು.17: ಒಂದೆಡೆ ಬಿರುಗಾಳಿಯೋಪಾದಿಯಲ್ಲಿ ಬೀಸುತ್ತಿರುವ ಗಾಳಿ, ಮತ್ತೊಂದೆಡೆ ರಭಸದಿಂದ ಸುರಿಯತ್ತಿರುವ ಭಾರೀ ಮಳೆ; ಈ ನಡುವೆ ನಗರದ ಅನೇಕ ಭಾಗಗಳಲ್ಲಿ ಬೀಳುತ್ತಿರುವ ಮರಗಳು, ಇದರಿಂದಾಗಿ ವಿದ್ಯುತ್ ತಂತಿಗಳು ತುಂಡರಿಸಲ್ಪಟ್ಟು ಕಳೆದ ರಾತ್ರಿಯಿಂದ ಮಡಿಕೇರಿ ನಗರ ಕಾರ್ಗತ್ತಲ ಕೂಪಕ್ಕೆ ತಳ್ಳಲ್ಪಟ್ಟಿದೆ.“ಸೆಸ್ಕ್”ನ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಪತ್ ಅವರ ಪ್ರಕಾರ ಮಡಿಕೇರಿ ನಗರದ ಅರಣ್ಯ ಭವನದಲ್ಲಿ, ಕಾಲೇಜು ಬಳಿ, ರಾಜಾಸೀಟ್ ಫೀಡರ್‍ಗೆ (ಮೊದಲ ಪುಟದಿಂದ) ಸಂಬಂಧಿತ ಕಡೆಗಳಲ್ಲಿ ಮರಗಳು ಬಿದ್ದು ನಿರಂತರ ದುರಸ್ತಿ ಕಾರ್ಯ ನಡೆದಿದೆ. ಕೆಲವೊಂದು ಕಡೆ ಅಪಾಯವನ್ನೂ ಲೆಕ್ಕಿಸದೆ ಮಳೆ ಗಾಳಿ ನಡುವೆ ಲೈನ್‍ಮೆನ್‍ಗಳು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಆಗಿಂದಾಗ್ಗೆ ವಿದ್ಯುತ್ ಕೈ ಕೊಡುತ್ತಿದೆ. ಎಲ್ಲವನ್ನೂ ದುರಸ್ತಿಗೊಳಿಸಲು ಕಾಲಾವಕಾಶ ಬೇಕಾಗಿದೆ. ಅಷ್ಟರಲ್ಲಿ ಮತ್ತೊಂದು ಕಡೆ ಹಾನಿಯಾಗುತ್ತಿದೆ.ಇಂದು ಮಡಿಕೇರಿಯ ಕೋಟೆ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ಸೋಮವಾರಪೇಟೆಯಿಂದ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಕೋಟೆ ಆವರಣದೊಳಗೆ ಒಯ್ದು ಕಾರು ನೀರಿನ ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿತು. ಸ್ಥಳೀಯ ಕೆಲವರು ಸಕಾಲದಲ್ಲಿ ನೆರವು ನೀಡಿ ಕಾರನ್ನು ಎತ್ತಿ ಚಾಲಿಸಲು ಸಾಧ್ಯವಾಯಿತು.ವಹಿವಾಟು ಸ್ಥಗಿತ

ಮಡಿಕೇರಿಯಲ್ಲಿ ಇಂದು ಭಾಗಶಃ ಬಂದ್ ಆದಂತಹ ವಾತಾವರಣ ಕಂಡುಬಂದಿತು. ಈ ಬಗ್ಗೆ “ಶಕ್ತಿ” ಮಾಹಿತಿ ಸಂಗ್ರಹಿಸಿದಾಗ “ಅಂಗಡಿಗಳಲ್ಲಿ ಕುಳಿತು ಮಾಡುವದೇನು, ಬಿಡಿಗಾಸು ಬರುವದಿಲ್ಲ, ಜನರೇ ಬರುತ್ತಿಲ್ಲ. ಈ ಭೀಕರ ಮಳೆ-ಗಾಳಿ ನಮ್ಮ ಭವಿಷ್ಯವನ್ನೇ ನುಂಗುತ್ತಿದೆ’ ಎನ್ನುವ ಹತಾಶ ಮನೋಭಾವ ವ್ಯಕ್ತಗೊಂಡಿತು. ಅನೇಕ ಅಂಗಡಿಗಳು ಇಂದು ನಗರದಲ್ಲಿ ಬಂದ್ ಆಗಿದ್ದುದು ಗೋಚರವಾಯಿತು.