ಮಡಿಕೇರಿ, ಜು. 16: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾ. 19 ಮತ್ತು 20 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ. 19 ರಂದು ಮಧ್ಯಾಹ್ನ ನಗರದಲ್ಲಿ ಮಳೆ ಹಾನಿ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಿಖರ ಮಾಹಿತಿಯನ್ನು ಇಂದೇ ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲ ಸೋಮವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕಳೆದ ಜೂನ್ ಮೊದಲ ಮತ್ತು ಎರಡನೇ ವಾರ ಹಾಗೂ ಕಳೆದ ಹದಿನೈದು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣದದಲ್ಲಿ ನಷ್ಟ ಉಂಟಾಗಿದ್ದು, ಈ ಬಗ್ಗೆ ತಳಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.ಈಗಾಗಲೇ ಮಳೆಯಿಂದ ವಾಸದ ಮನೆ ಹಾನಿ, ಜಾನುವಾರು ಪ್ರಾಣ ಹಾನಿ ಸಂಬಂಧ ತುರ್ತು ಪರಿಹಾರ ವಿತರಣೆಯನ್ನು ತಹಶೀಲ್ದಾರರು ಮಾಡಬೇಕು. ಪರಿಹಾರ ವಿತರಣೆಯಲ್ಲಿ ವಿಳಂಭ ಧೋರಣೆ ಅನುಸರಿಸಬಾರದು.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ರಸ್ತೆ ಹಾನಿ ಸಂಬಂಧ ನಿಖರ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಅವರು ತಾ. 20 ರಂದು

(ಮೊದಲ ಪುಟದಿಂದ) ಭಾಗಮಂಡಲ-ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದ್ದು, ಹಾರಂಗಿಗೆ ತೆರಳಿ ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಆದ್ದರಿಂದ ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆ, ಹಾಗೆಯೇ ಗುಡ್ಡೆಹೊಸೂರು-ಹಾರಂಗಿ ರಸ್ತೆ ಬದಿ ಗಿಡ ಕಡಿಯುವದು, ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭಾಗಮಂಡಲ ಬಳಿಯ ಸೇತುವೆ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ನಿರ್ದೇಶನ ನೀಡಿದರು.

ಭಾಗಮಂಡಲದಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳವಾಗುವದರಿಂದ ಮಂಗಳೂರಿನಿಂದ ಹೆಚ್ಚುವರಿ ಬೋಟ್ ತರಿಸಿಕೊಳ್ಳುವಂತೆ ಗೃಹ ರಕ್ಷಕ ದಳದ ಅಧಿಕಾರಿಗೆ ಸಲಹೆಯಿತ್ತರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಮಾಹಿತಿ ಒದಗಿಸಬೇಕು. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಕಂಬಗಳನ್ನು ಸರಿಪಡಿಸುವದು ಹಾಗೂ ಟ್ರಾನ್ಸ್‍ಫಾರ್ಮ್‍ಗಳನ್ನು ಬದಲಿಸಬೇಕು.

ಬೆಳೆ ಹಾನಿ ಸಂಬಂಧ, ಕೃಷಿ, ತೋಟಗಾರಿಕೆ, ಕಾಫಿ ಮಂಡಳಿಯ ಇಲಾಖಾ ಅಧಿಕಾರಿಗಳು, ಹಾಗೆಯೇ ಬೃಹತ್ ನೀರಾವರಿ, ಸಣ್ಣ ನೀರಾವರಿ, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ನಷ್ಟ ಸಂಬಂಧಿಸಿದಂತೆ ಮಾಹಿತಿ ಒದಗಿಸಬೇಕು.

ಮಡಿಕೇರಿ ನಗರಸಭೆ ವ್ಯಾಪ್ತಿಗೆ ಸೇರಿದಂತೆ ಅಗತ್ಯವಿರುವೆಡೆ ಗಂಜಿ ಕೇಂದ್ರ ತೆರೆಯಬೇಕು. ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಳೆ ಹಾನಿ ಪರಿಹಾರ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ತಹಶೀಲ್ದಾರರ ಕಚೇರಿಯಲ್ಲಿ ಸಂಬಂಧಪಟ್ಟ ಕಡತ ನಿರ್ವಹಣೆ ಮಾಡುವವರು ಹತ್ತು ದಿನಕ್ಕೂ ಹೆಚ್ಚು ಇಟ್ಟುಕೊಂಡಿದ್ದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ನಾಪೋಕ್ಲು, ಗೋಣಿಕೊಪ್ಪ, ಕುಶಾಲನಗರ ಮತ್ತಿತರ ಕಡೆಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶದಲ್ಲಿ ಸೇತುವೆ ಇಲ್ಲದೆ ಬೊಂಬುಗಳ ಮೂಲಕ ನದಿ ದಾಟುವ ಪರಿಸ್ಥಿತಿ ಇದೆ. ಕರಿಕೆ, ಬಜೆಗುಂಡಿ, ಸೇರಿದಂತೆ ಹಲವು ಕಡೆಗಳಲ್ಲಿ ಸೇತುವೆ ಇಲ್ಲದೆ ಅಲ್ಲಿನ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದ್ದು, ಈ ಸಂಬಂಧ ಗಮನಹರಿಸಬೇಕು. ಪಂಚಾಯತ್ ರಾಜ್ ಎಂಜಿನಿಯರ್ ಅವರು ಅಗತ್ಯ ವರದಿ ನೀಡುವಂತೆ ಸೂಚನೆ ನೀಡಿದರು.

ಶಾಲಾ-ಕಾಲೇಜು, ಅಂಗನವಾಡಿ, ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳು, ಆರೋಗ್ಯ ಇಲಾಖೆ ಹೀಗೆ ಹಲವು ಇಲಾಖೆಗಳ ಕಟ್ಟಡಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಒದಗಿಸುವದರ ಜೊತೆಗೆ ನಷ್ಟ ಸಂಬಂಧ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ತಹಶೀಲ್ದಾರರು, ತಾ.ಪಂ.ಇಒಗಳು, ಎಂಜಿನಿಯರ್‍ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಳೆ ಹಾನಿ ಪರಿಹಾರ ಸೇರಿದಂತೆ ಹಲವು ಕಡತಗಳನ್ನು ತ್ವರಿತ ವಿಲೇವಾರಿಗೆ ಸೂಚನೆ ನೀಡಿದರು.

ವಿದ್ಯುತ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕೇಳಿ ಬರುತ್ತದೆ. ಇಂತಹ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ.ಸಿಇಒ ತಿಳಿಸಿದರು.

ಸೆಸ್ಕ್ ಇಲಾಖೆಯ ಇಇ ಸೋಮಶೇಖರ್ ಅವರು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿರುವದರಿಂದ ಮರಗಳು ವಿದ್ಯುತ್ ಕಂಬಗಳಿಗೆ ಬೀಳುತ್ತಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಒಂದು ಕಡೆ ಸರಿಪಡಿಸಿಕೊಂಡು ಹೋಗುತ್ತಿದ್ದರೆ, ಮತ್ತೊಂದು ಕಡೆ ಮರಗಳು ಉರುಳುತ್ತಿವೆ. ಆದರೂ ತ್ವರಿತವಾಗಿ ಸರಿಪಡಿಸುವ ಕಾರ್ಯ ಮಾಡಲಾಗುವದು. ವಿದ್ಯುತ್ ವ್ಯತ್ಯಯ ಬಗ್ಗೆ 1912 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಸೋಮಶೇಖರ ತಿಳಿಸಿದರು.

ಡಿವೈಎಸ್‍ಪಿ ಸುಂದರರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್, ಜಯ ತಹಶೀಲ್ದಾರರಾದ ಕುಸುಮ, ಗೋವಿಂದರಾಜು, ಮಹೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಉಪ ನಿರ್ದೇಶಕ ರಾಜು, ಲೋಕೋಪಯೋಗಿ ಇಇ ವಿನಯ ಕುಮಾರ್, ಗ್ರಾಮೀಣ ಅಭಿವೃದ್ಧಿ ಇಇ ರೇವಣ್ಣವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪೌರಾಯುಕ್ತೆ ಬಿ. ಶುಭ, ಡಿಡಿಪಿಐ ಮಂಜುಳ, ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ, ಐಟಿಡಿಪಿ ಅಧಿಕಾರಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.

ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ಭೂ ದಾಖಲೆಗಳ ಉಪ ನಿರ್ದೇಶಕಿ ವಿದ್ಯಾಯಿನಿ, ಸಹಾಯಕ ನಿರ್ದೇಶಕ ಷಂಶುದ್ದೀನ್, ವೈದ್ಯಕೀಯ ಕಾಲೇಜಿನ ನಿರ್ದೇಶಕ ಕಾರ್ಯಪ್ಪ, ತಾ.ಪಂ. ಇಒಗಳಾದ ಲಕ್ಷ್ಮಿ, ಜಯಣ್ಣ, ಸುನೀಲ್‍ಕುಮಾರ್, ಜಿಲ್ಲಾ ಖಜಾನಾಧಿಕಾರಿ ಸತೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್, ನಗರಾಭಿವೃದ್ಧಿ ಶಾಖೆಯ ಎಇಇ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಇತರರು ಇದ್ದರು.