ಸೋಮವಾರಪೇಟೆ, ಜು.16: ರಾಜ್ಯ ಸರ್ಕಾರದ ನಗರೋತ್ಥಾನ ಯೋಜನೆಯಲ್ಲಿ 1.98ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಿದರು.ಎಸ್‍ಎಫ್‍ಸಿ ವಿಶೇಷ ಅನುದಾನದಡಿ ರೂ.1.98 ಕೋಟಿ ವೆಚ್ಚದಲ್ಲಿ ಇಲ್ಲಿನ ಕ್ಲಬ್‍ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಅಧ್ಯಕ್ಷರು/ಉಪಾಧ್ಯಕ್ಷರ ಕೊಠಡಿ, ಕಂದಾಯ, ಇಂಜಿನಿಯರಿಂಗ್, ಆರೋಗ್ಯ ಇಲಾಖೆ ಸೇರಿದಂತೆ ಕಂಪ್ಯೂಟರ್ ಕೆಲಸಗಳಿಗಾಗಿಯೇ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ.ಇದರೊಂದಿಗೆ ಮೇಲಂತಸ್ತಿನಲ್ಲಿ ಸಭಾಂಗಣ, ದಾಖಲೆಗಳನ್ನು ಭದ್ರವಾಗಿರಿಸಲು ಕೊಠಡಿ, ಕಚೇರಿ ಸಿಬ್ಬಂದಿಗಳಿಗೆ ಶೌಚಾಲಯ, ನೆಲಮಾಳಿಗೆಯಲ್ಲಿ 40ಕ್ಕೂ ಅಧಿಕ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳಾವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕ ಶೌಚಾಲಯ, ಜತೆಗೆ ನೂತನ ಕಟ್ಟಡದಲ್ಲಿ 8 ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಾಗಿದೆ.

ನೂತನ ಕಟ್ಟಡ ಉದ್ಘಾಟನೆ ಸಂದರ್ಭ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ಜಿ.ಪಂ. ಮಾಜೀ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರುಗಳಾದ ಬಿ.ಎಂ. ಸುರೇಶ್, ಲೀಲಾ ನಿರ್ವಾಣಿ, ಶೀಲಾ ಡಿಸೋಜ, ಮೀನಾಕುಮಾರಿ, ಸುಷ್ಮಾ, ಸುಶೀಲ, ಕೆ.ಎ. ಆದಂ, ವೆಂಕಟೇಶ್, ಈಶ್ವರ್, ನಾಮನಿರ್ದೇಶಿತ ಸದಸ್ಯ ಉದಯಶಂಕರ್, ಇಂದ್ರೇಶ್, ಹೆತ್ತೂರು ರಾಜಣ್ಣ ಅವರುಗಳು ಉಪಸ್ಥಿತರಿದ್ದರು.

ರಾಜಕೀಯಮಯ: ಕಟ್ಟಡ ಉದ್ಘಾಟನೆ ನಂತರ ಆಯೋಜಿಸಿದ್ದ ಕಾರ್ಯಕ್ರಮ ರಾಜಕೀಯ ಭಾಷಣಕ್ಕೆ ಸೀಮಿತವಾಯಿತು.

(ಮೊದಲ ಪುಟದಿಂದ) 1.98 ಕೋಟಿ ವೆಚ್ಚದ ಕಟ್ಟಡವನ್ನು ನಾವು ಮಾಡಿಸಿದ್ದು, ನಾವು ಮಾಡಿಸಿದ್ದು ಎಂದು ಕಾಂಗ್ರೆಸ್-ಬಿಜೆಪಿ ಸದಸ್ಯರುಗಳು ಪರೋಕ್ಷವಾಗಿ ಸಾರ್ವಜನಿಕರಿಗೆ ಮನದಟ್ಟು ಮಾಡಲು ಯತ್ನಿಸಿದರು.

ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಎಲ್ಲರನ್ನೂ ಸ್ಮರಿಸಿಕೊಂಡರೆ, ಕಾಂಗ್ರೆಸ್‍ನ ಶೀಲಾ ಡಿಸೋಜ ಹಾಗೂ ಬಿಜೆಪಿಯ ಲೀಲಾ ನಿರ್ವಾಣಿ ಅವರುಗಳು ಶ್ರೇಯಸ್ಸನ್ನು ತಮ್ಮ ಪಕ್ಷದ ಪರವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿದರು.

ಆಕಾಂಕ್ಷಿಗಳ ದಂಡು: ಕೆಲ ಸಮಯದಲ್ಲೇ ಪ.ಪಂ. ಚುನಾವಣೆ ಎದುರಾಗಲಿರುವ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಆಕಾಂಕ್ಷಿಗಳ ದಂಡು ನಾಯಕರ ಎದುರು ಕಂಡುಬಂತು. ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಲವರು ಇಂದಿನ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿ ತಮ್ಮ ಇರುವಿಕೆಯನ್ನು ನಾಯಕರ ಎದುರು ಸಾಬೀತುಪಡಿಸಲು ಮುಂದಾದರು.

ಕಾರ್ಯಕ್ರಮದ ಕೊನೆಯಲ್ಲಿ ಇಂಜಿನಿಯರ್ ವೀರೇಂದ್ರ, ಗುತ್ತಿಗೆದಾರ ಶ್ರೀನಿವಾಸ್ ಅವರುಗಳನ್ನು ಪ.ಪಂ. ವತಿಯಿಂದ ಸನ್ಮಾನಿಸಲಾಯಿತು.