ಗೋಣಿಕೊಪ್ಪ ವರದಿ, ಜು. 8 : ತಿತಿಮತಿ ಸೇತುವೆಯ ರಸ್ತೆಯಲ್ಲಿ ಕೆಸರಿನಿಂದ ವಾಹನಗಳ ಚಕ್ರ ಸಿಲುಕಿ ಸಮಸ್ಯೆ ಆಗುತ್ತಿರುವದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ. ವಾಹನಗಳು ಮಾಲ್ದಾರೆ ಹಾಗೂ ನಾಗರಹೊಳೆ ಮಾರ್ಗವಾಗಿ ಸಂಚರಿಸಲು ಅನುವು ಮಾಡಿ ಕೊಡಲಾಗಿದೆ.

ತಾತ್ಕಾಲಿಕ ಸೇತುವೆ ಕುಸಿದ ಕಾರಣ ನೂತನ ಸೇತುವೆ ಮೂಲಕ ಭಾನುವಾರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಸೇತುವೆಯ ಇಕ್ಕೆಲಗಳ ರಸ್ತೆಯು ಡಾಂಬರೀಕರಣ ವಾಗದ ಕಾರಣ ವಾಹನಗಳು ಕೆಸರಿನಲ್ಲಿ ಹೂತು ಸಂಚಾರಕ್ಕೆ ತೊಡಕುಂಟಾಗಿತ್ತು. ಇದರಿಂದಾಗಿ ಭಾನುವಾರ ವಾಹನಗಳು 2-3 ತಾಸುಗಳ ಕಾಲ ನಿಂತು ಸಂಚರಿಸುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಸಣ್ಣ ವಾಹನಗಳು ಕೆಸರಿನಲ್ಲಿ ಹೂತುಕೊಂಡು ಸಾರ್ವಜನಿಕರು ತಳ್ಳಿ ಮೇಲೆತ್ತುವ ಕೆಲಸ ಮಾಡಿದ್ದರು. ಇದರಂತೆ ವಾಹನ ದಟ್ಟಣೆ ಹೆಚ್ಚಾಗಿ ಸುಮಾರು 2 ಕಿ. ಮೀ. ದೂರದಷ್ಟು ವಾಹನಗಳು ಸಾಲಾಗಿ ನಿಂತು ಸಂಚರಿಸಬೇಕಿತ್ತು. ಭಾನುವಾರ ಮುಂಜಾನೆವರೆಗೂ ವಾಹನಗಳು ನಿಂತು ಸಾಗಿದವು. ಇದರಿಂದಾಗಿ ಆ ಮಾರ್ಗವನ್ನು ಬಂದ್ ಮಾಡಲಾಗಿದೆ.

ತಾತ್ಕಾಲಿಕ ಸೇತುವೆಯನ್ನು ಮತ್ತೆ ದುರಸ್ತಿ ಪಡಿಸಲಾಗುತ್ತಿದೆ. ಕುಸಿದಿರುವ ಮಣ್ಣನ್ನು ತೆಗೆದು ಲಘು ವಾಹನಗಳು ಸಂಚರಿಸುವಂತೆ ಅನುವು ಮಾಡಿ ಕೊಡಲಾಗುತ್ತಿದೆ. ಜೆಸಿಬಿ ಮೂಲಕ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಮೈಸೂರು- ಗೋಣಿಕೊಪ್ಪ ಹೆದ್ದಾರಿಯಾದ ಕಾರಣ ವಾಹನ ದಟ್ಟಣೆ ಹೆಚ್ಚಿರುವದರಿಂದ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ದಿನಪೂರ್ತಿ ಕೆಲಸ ನಡೆಸಲಾಗುತ್ತಿದೆ. ಕೆಸರು ಹೆಚ್ಚಿರುವದರಿಂದ ಈ ಮಾರ್ಗವಾಗಿ ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಕೊಡಗಿನಲ್ಲಿ ಮುಂಗಾರು ಆರಂಭದ ಬಗ್ಗೆ ತಿಳಿದಿದ್ದರೂ ಗುತ್ತಿಗೆದಾರ ಕಾಮಗಾರಿಯನ್ನು ವಿಳಂಬ ಮಾಡಿರುವದರಿಂದ ತೊಂದರೆ ಅನುಭವಿಸಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೇತುವೆಯೊಂದಿಗೆ ರಸ್ತೆಗಳ ಕೆಲಸ ಕೂಡ ಮಾಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪೊಲೀಸರು ಗೋಣಿಕೊಪ್ಪದ ಪಾಲಿಬೆಟ್ಟ ರಸ್ತೆ ಜಂಕ್ಷನ್‍ನಲ್ಲಿ ಬ್ಯಾರಿಕೇಡ್ ಹಾಕಿ ಮೈಸೂರು ಕಡೆಗೆ ತೆರಳುವ ವಾಹನಗಳನ್ನು ಪಾಲಿಬೆಟ್ಟ, ಮಾಲ್ದಾರೆ ಮಾರ್ಗವಾಗಿ ಸಂಚರಿಸುವಂತೆ ಕ್ರಮಕೈಗೊಂಡರು. ಇದರಿಂದಾಗಿ ತಿತಿಮತಿವರೆಗೆ ತೆರಳಿ ಹಿಂತಿರುಗುವ ಆಯಾಸ ತಪ್ಪಿದಂತಾಯಿತು. ಪೊಲೀಸರ ಕಾರ್ಯ ವೈಖರಿ ಜನಮೆಚ್ಚುಗೆ ಪಡೆಯಿತು. -ವರದಿ : ಸುದ್ದಿಪುತ್ರ