ಗೋಣಿಕೊಪ್ಪಲು, ಜು.7: ವಾರದ ರಜೆ ಕಳೆಯಲು ಚೆನ್ನೈನಿಂದ ಕೊಡಗಿಗೆ ಬೈಕ್‍ನಲ್ಲಿ ಆಗಮಿಸುತ್ತಿದ್ದ ಯುವಕರ ತಂಡ ಶನಿವಾರ 11.30ರ ಸುಮಾರಿಗೆ ಗಡಿ ಭಾಗ ಆನೆ ಚೌಕೂರು ಮಾರ್ಗವಾಗಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೊಳ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಗೋಣಿಕೊಪ್ಪ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್‍ಗೆ ಬೈಕ್ ಡಿಕ್ಕಿಯಾಗಿದೆ.ಪರಿಣಾಮ ಬೈಕ್‍ನಲ್ಲಿದ್ದ ಚೆನ್ನೈ ಮೂಲದ ಯುವಕರಾದ ಲೋಕೇಶ್ (25) ಹಾಗೂ ಅಶ್ವಿನ್‍ಗೆ (24) ಗಂಭೀರ ಗಾಯಗಳಾಗಿದ್ದು, ಇಬ್ಬರು ಯುವಕರ ಕಾಲು ಮುರಿದಿದೆ. ಸುರಿಯುತ್ತಿದ್ದ ಮಳೆಯ ನಡುವೆ ಬುಲೆಟ್ ಬೈಕ್‍ನಲ್ಲಿ ಯುವಕರು ರಜ ದಿನವನ್ನು ಕಳೆಯಲು ಕೊಡಗಿಗೆ ಆಗಮಿಸಿದ್ದರು.ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲಪಿದ 5 ಯುವಕರ ತಂಡ ಮೈಸೂರಿನಿಂದ ಇಬ್ಬರು ಯುವಕರು ಬುಲೆಟ್ ಬೈಕ್‍ನಲ್ಲಿ ಇನ್ನು ಮೂವರು ಯುವಕರು ಕಾರಿನಲ್ಲಿ ಶನಿವಾರ ಬೆಳಿಗ್ಗೆ ಮೈಸೂರಿನಿಂದ ಪ್ರಯಾಣ ಬೆಳೆಸಿದ್ದರು.

ಬೈಕ್‍ನಲ್ಲಿದ್ದ ಲೋಕೇಶ್ ಹಾಗೂ ಆಶ್ವಿನ್ ಹೆಲ್ಮೆಟ್ ಧರಿಸಿ ಮುಂದೆ ಸಾಗಿದ್ದರು. ಬೈಕ್‍ನ ಹಿಂದೆ ಕಾರು ಬೈಕ್ ಅನ್ನು ಹಿಂಬಾಲಿಸುತ್ತಿತ್ತು. ತಿತಿಮತಿ ಆನೆ ಚೌಕೂರು ಗೇಟ್‍ನ ಬಳಿ ಬೈಕ್ ವೇಗವಾಗಿ

(ಮೊದಲ ಪುಟದಿಂದ) ತೆರಳಿದ್ದರಿಂದ ಕಾರು ಸ್ವಲ್ಪ ನಿಧಾನಗತಿಯಲ್ಲಿ ತೆರಳುತ್ತಿತ್ತು. ತಿತಿಮತಿ ಭದ್ರಗೊಳದ ಸಮೀಪ ಬೈಕ್ ತೆರಳುತ್ತಿದ್ದಂತೆಯೇ ಎದುರಿಗೆ ಬರುತ್ತಿದ್ದ ಸರ್ಕಾರಿ ಬಸ್‍ಗೆ ಡಿಕ್ಕಿಯಾಗಿದೆ. ಯುವಕರಿಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಇವರ ಪ್ರಾಣ ಉಳಿದಿದೆ. ಕಾರಿನಲ್ಲಿ ಇವರನ್ನು ಹಿಂಬಾಲಿಸುತ್ತಿದ್ದ ಯುವಕರಿಗೆ ಈ ಘಟನೆ ಕಣ್ಣ ಮುಂದೆಯೇ ನಡೆದ್ದರಿಂದ ಆಘಾತಗೊಂಡಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚಿನ ಸಮಯ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು.

ಸ್ಥಳೀಯರು ತಿತಿಮತಿ ವಿವೇಕಾನಂದ ಆಸ್ಪತ್ರೆಯ ಆ್ಯಂಬುಲೆನ್ಸ್ ಸಹಾಯ ಪಡೆದು ಗೋಣಿಕೊಪ್ಪ ಆಸ್ಪತ್ರೆಗೆ ಯುವಕರನ್ನು ಸಾಗಿಸಿದರು. ನಂತರ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾರಾದ ಡಾ. ಗ್ರೀಷ್ಮಾ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮಾಹಿತಿ ತಿಳಿದ ಸಮಾಜ ಸೇವಕರಾದ ಸ್ನೇಕ್ ಶರತ್ ಕಾಂತ್‍ರವರು ಆಸ್ಪತ್ರೆಗೆ ತೆರಳಿ ವಾಹನ ಚಾಲಕರ ಸಂಘದ ಆ್ಯಂಬುಲೆನ್ಸ್‍ನಲ್ಲಿ ಯುವಕರನ್ನು ಕಳುಹಿಸಿಕೊಡುವಲ್ಲಿ ಸಹಕರಿಸಿದರು.-ಹೆಚ್.ಕೆ.ಜಗದೀಶ್