ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡಿರುವ ಕಾರಣ ಜಿಲ್ಲಾಡಳಿತ ಶನಿವಾರ ಶಾಲಾ ಕಾಲೇಜು ಸಹಿತ ಅಂಗನವಾಡಿಗಳಿಗೆ ರಜೆ ಘೋಷಣೆಯೊಂದಿಗೆ ಮುಂಜಾಗ್ರತಾ ಕ್ರಮಕೈಗೊಂಡಿದೆ.ಕಳೆದೊಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ನಿನ್ನೆಯಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ನಿನ್ನೆ ಬೆಳಿಗ್ಗೆಯಿಂದ ಸಾಧಾರಣವಾಗಿಯೇ ಸುರಿಯುತ್ತಿದ್ದ ಮಳೆ ಸಂಜೆ ಯಾಗುತ್ತಲೇ ಬಿರುಸುಗೊಂಡಿದ್ದು, ಜಿಲ್ಲೆಯಾಧ್ಯಂತ ಧಾರಾಕಾರವಾಗಿ ಸುರಿಯುತ್ತಿದೆ. ರಾತ್ರಿಯಿಡಿ ಎಡೆಬಿಡದೆ ಸುರಿದ ಮಳೆ ಈಗಲೂ ತನ್ನ ಅಬ್ಬರ ಮುಂದುವರಿಸಿದೆ. ಇನ್ನು ಮಳೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಹಾರಂಗಿ ಜಲಾಶಯ ದಿಂದ ನೀರನ್ನು ನದಿಗೆ ಬಿಡಲು ಕ್ರಮಕೈಗೊಂಡಿದ್ದು, ನದಿ ಪಾತ್ರದ ಜನತೆ ಎಚ್ಚರ ವಹಿಸುವಂತೆ ಅವರು ಸಲಹೆ ನೀಡಿದ್ದಾರೆ.
ತಿತಿಮತಿ ಹೆದ್ದಾರಿ ಸೇತುವೆ ಬಳಿ ಕುಸಿತದ ಹಿನ್ನೆಲೆ ನೂತನ ಸೇತುವೆ ಮುಖಾಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಜನರಿಗೆ ತೊಂದರೆಯಾಗದಂತೆ ನಿಗಾವಹಿ ಸಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.
ಭಾಗಮಂಡಲದ ನಾಪೋಕ್ಲು ಮತ್ತು ಮಡಿಕೇರಿ ಮಾರ್ಗದ ಸೇತುವೆಗಳ ಮುಳುಗಡೆ ಸಂಬಂಧ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶ್ರೀವಿದ್ಯಾ ಸ್ಪಷ್ಟಪಡಿಸಿದರು. ನಿನ್ನೆಯಿಂದ ಮಳೆ ತೀವ್ರಗೊಂಡಿದ್ದು, ಎಲ್ಲೆಡೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ತಂಡ ಸಾರ್ವಜನಿಕ ರೊಂದಿಗೆ ಆಸ್ತಿ-ಪಾಸ್ತಿ ಸುರಕ್ಷತಾ ಸಲುವಾಗಿ ಸದಾ ಕಾಳಜಿ ವಹಿಸು ವಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.