ಸೋಮವಾರಪೇಟೆ, ಜು. 7: ಸಮೀಪದ ಕುಂಬೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಕಳೆದ ವಾರ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಕೊಪ್ಪದಲ್ಲಿ ಹಸುವೊಂದನ್ನು ಬಲಿ ತೆಗೆದುಕೊಂಡಿದ್ದ ಹುಲಿ, ನಂತರ ಆ ಭಾಗದಲ್ಲಿ ಪತ್ತೆಯಾಗಿರಲಿಲ್ಲ. ಇದೀಗ ಕುಂಬೂರು ಗ್ರಾಮದ ಕುಂಬಾರ ಬಾಣೆಯ ಪೋರೆರ ಸೋಮಯ್ಯ ನವರ ಗದ್ದೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಬೆಟ್ಟದಕೊಪ್ಪದಿಂದ ಇಲ್ಲಿಗೆ ಹುಲಿ ಆಗಮಿಸಿರುವ ಬಗ್ಗೆ ಸಂಶಯ ಮೂಡಿದೆ.ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಅವ್ಯಾಹತವಾಗಿ ಮುಂದುವರೆ ಯುತ್ತಿರುವ ಹುಲಿ ಧಾಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿರುವ ನಡುವೆಯೇ ಸೋಮವಾರಪೇಟೆ ತಾಲೂಕಿನ ಕುಂಬೂರು ಹಾಗೂ ಬೆಟ್ಟದಳ್ಳಿ ಗ್ರಾಮಗಳಲ್ಲೂ ಹುಲಿಗಳ ಸಂಚಾರ ಆರಂಭವಾಗಿರುವದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಕುಂಬೂರು ಗ್ರಾಮದ ಗದ್ದೆ ಯಿಂದ ಕುಂಬಾರಬಾಣೆ ಹಾಗೂ ಟಾಟಾ ಕಂಪನಿಯ ತೋಟಗಳಲ್ಲಿ ಸಂಚರಿಸಿದೆ. ಕಾರ್ಮಿಕರು, ದುಡಿಯುವ ವರ್ಗ ಹಾಗೂ ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ದಿನನಿತ್ಯ ಅದೇ ಮಾರ್ಗ ವಾಗಿ ತೆರಳಬೇಕಾಗಿ ರುವದರಿಂದ ಭಯಭೀತರಾಗಿದ್ದು, ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ

(ಮೊದಲ ಪುಟದಿಂದ) ತೆರಳಿದ್ದರೂ ಈವರೆಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿಚಾರವನ್ನು ತಿಳಿಸದೇ ಇರುವದರಿಂದ ಭಯದ ವಾತಾವರಣ ಮುಂದುವರೆದಿದೆ ಎಂದು ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ಎಂ.ಸೋಮಪ್ಪ ತಿಳಿಸಿದ್ದಾರೆ.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ, ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿರುವದು ದೃಢಪಟ್ಟಿದೆ. ಮೂರು ದಿನಗಳ ಹಿಂದೆ ಬೆಳಗಿನ ಜಾವ ಆಗಮಿಸಿರುವ ಹುಲಿಯು, ಪಶು-ಪ್ರಾಣಿ ಸೇರಿದಂತೆ ಯಾವದೇ ಪ್ರಾಣಾಪಾಯ ಮಾಡಿಲ್ಲ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹಾನಗಲ್ಲು ಗ್ರಾಮದ ದುದ್ದುಗಲ್ಲು-ಕಿರಗಂದೂರು ಗ್ರಾಮದ ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಯುವಕರಿಗೆ ಹುಲಿಯೊಂದು ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಇದೀಗ ಕುಂಬೂರು ಭಾಗದಲ್ಲಿ ಹುಲಿ ಹೆಜ್ಜೆ ಗೋಚರಿಸಿರುವದು ಸಾರ್ವಜನಿಕ ವಲಯದಲ್ಲಿ ಭಯಾತಂಕ ಮೂಡಿಸಿದೆ.