ಮಡಿಕೇರಿ, ಜು. 7: ನಿನ್ನೆಯಿಂದ ಆರಂಭಗೊಂಡಿರುವ ಪುನರ್ವಸು ಮಳೆಯು ಕಳೆದ 24 ಗಂಟೆಗಳಲ್ಲಿ ಧಾರಾಕಾರವಾಗಿ ಸುರಿಯುವದರೊಂದಿಗೆ, ಕಳೆದ ತಿಂಗಳು ಜೂನ್ ದ್ವಿತೀಯ ವಾರ ಸೃಷ್ಟಿಸಿದ್ದ ಅವಾಂತರಗಳು ಮರುಕಳಿಸುವ ಆತಂಕ ಮೂಡಿದೆ. ಕೊಡಗು - ಕೇರಳ ಗಡಿಯ ಅಂತರರಾಜ್ಯ ಹೆದ್ದಾರಿಯಲ್ಲಿ ಭೂಕುಸಿತದಿಂದ ಎದುರಾಗಿದ್ದ ಅನಾಹುತಗಳು ಮತ್ತೆ ತಲೆದೋರಬಹುದಾದ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.ಈಗಾಗಲೇ ಮಾಕುಟ್ಟ ರಸ್ತೆಯನ್ನು ಪ್ರಥಮ ಹಂತದಲ್ಲಿ ಸರಿಪಡಿಸಿ, ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ತೊಡಕಾಗಿದ್ದ ಮರಗಳ ಸಹಿತ ಕಲ್ಲುಬಂಡೆಗಳು, ಮಣ್ಣನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಜೂನ್ 13ರಿಂದ ಇದುವರೆಗೆ ಈ ಮಾರ್ಗದಲ್ಲಿ ನಿರ್ಬಂಧಿಸಲಾಗಿದ್ದ ವಾಹನ ಸಂಚಾರವನ್ನು ಭಾರೀ ವಾಹನಗಳಿಗೆ ಮುಂದುವರಿಸಲಾಗಿದೆ. ಬದಲಾಗಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಹಿಂದಿನ ನಷ್ಟ ರೂ. 13.93 ಕೋಟಿ: ಕೊಡಗಿನಲ್ಲಿ ಕಳೆದ ತಿಂಗಳ ಮಳೆಯ ತೀವ್ರತೆಯಿಂದ ರೂ. 13.93 ಕೋಟಿ ಮೊತ್ತದ ನಷ್ಟ ಅಂದಾಜು ಮಾಡುವದರೊಂದಿಗೆ, ಜಿಲ್ಲೆಗೆ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭೇಟಿ ಸಂದರ್ಭ ಸರಕಾರಕ್ಕೆ ಅತಿವೃಷ್ಟಿ ಪರಿಹಾರ ಕೋರಿ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳಿಂದ ಗೊತ್ತಾಗಿದೆ.

ಕೃಷಿ ಚಟುವಟಿಕೆ: ಆಶಾದಾಯಕ ಮಳೆಯ ನಡುವೆ ಜಿಲ್ಲೆಯ ಎಲ್ಲೆಡೆ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಈಗಾಗಲೇ ಶೇ.60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡು ಸಸಿಮಡಿಗಳನ್ನು ಸಿದ್ಧಗೊಳಿಸುತ್ತಿರುವ ದೃಶ್ಯ ಗೋಚರಿಸಿದೆ. ಗದ್ದೆಗಳ ಬಹುತೇಕ ಉಳುಮೆ ಕೆಲಸ ಮುಕ್ತಾಯ ಹಂತದಲ್ಲಿದ್ದು, ಮಳೆ ಆಧಾರಿತ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಉತ್ತಮವಾಗಿ ಕಂಡುಬಂದಿದೆ.

ಇನ್ನು ಮಡಿಕೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಅಲ್ಲಲ್ಲಿ ಭತ್ತದ ನಾಟಿ ಕೆಲಸ ನಡೆಯುತ್ತಿದೆ. ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕಿನ ಬಯಲು ಸೀಮೆಯಲ್ಲಿ ಮುಸುಕಿನ ಜೋಳ, ಇತರ ಧಾನ್ಯಗಳು ತಂಬಾಕು ಕೃಷಿ ಕೈಗೊಳ್ಳಲಾಗಿದೆ. ಈ ತಾಲೂಕಿನಲ್ಲಿ ಭತ್ತದ ನಾಟಿಗೆ ಶಾಂತಳ್ಳಿ ಹೋಬಳಿ, ಗರ್ವಾಲೆ ಹೋಬಳಿಗಳಲ್ಲಿ ತಯಾರಿ ನಡೆದಿರುವದು ಗೋಚರಿಸಿದೆ.

(ಮೊದಲ ಪುಟದಿಂದ) ಕಳೆದ 24 ಗಂಟೆಗಳಲ್ಲಿ ಮಳೆ ರಭಸದಿಂದ ಕೂಡಿದ್ದು, ಎಲ್ಲಿಯೂ ಅನಾಹುತಗಳ ವರದಿ ಲಭ್ಯವಾಗಿಲ್ಲ. ತಲಕಾವೇರಿ, ಭಾಗಮಂಡಲ, ಶಾಂತಳ್ಳಿ, ಶ್ರೀಮಂಗಲ, ಹುದಿಕೇರಿ, ಬಿರುನಾಣಿ ವ್ಯಾಪ್ತಿಯಲ್ಲಿ ಮಳೆ ಧಾರಾಕಾರ ಸುರಿದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಹಾರಂಗಿ ನೀರು ಹೊಳೆಗೆ

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟವು 2856 ಅಡಿಯಿದ್ದು, ಗರಿಷ್ಠ 2859 ಅಡಿಗಳಾಗಿದೆ. ಕಳೆದ ವರ್ಷ ಈ ಅವಧಿಗೆ ಜಲಾಶಯದಲ್ಲಿ ಕೇವಲ 2829 ಅಡಿ ನೀರು ಸಂಗ್ರಹಣೆಗೊಂಡಿತ್ತು. ಇಂದು ಜಲಾಶಯಕ್ಕೆ 24000 ಕ್ಯೂಸೆಕ್ಸ್ ನೀರಿನ ಒಳ ಹರಿವು ಇದ್ದು, ಜಲಾಶಯ ನೀರಿನ ಮಟ್ಟ ಏರುತ್ತಿರುವ ಕಾರಣ ಈ ಸಂಜೆ 1200 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದ ನೀರಿನ ಸಾಮಥ್ರ್ಯ 8.5 ಟಿ.ಎಂ.ಸಿ. ಆಗಿದ್ದು, ಇಂದು ಸಂಜೆ ವೇಳೆಗೆ 7.3 ಟಿ.ಎಂ.ಸಿ. ತಲಪಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಹಾರಂಗಿ ನೀರಾವರಿ ವಿಭಾಗದ ಪ್ರಭಾರ ಅಧೀಕ್ಷಕ ಅಭಿಯಂತರ ಜಿ. ಪ್ರಸಾದ್ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಜಲಾಶಯದೊಳಗೆ ಬರುವ ನೀರಿನ ಪ್ರಮಾಣ ನೋಡಿಕೊಂಡು ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುವದು ಎಂದರು. ಈ ವೇಳೆ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಕಾಳೇಗೌಡ, ಸಹಾಯಕ ಅಭಿಯಂತರ ಧರ್ಮಜ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ತಿತಿಮತಿ ರಸ್ತೆ ಮರು ಕುಸಿತ: ಗೋಣಿಕೊಪ್ಪಲು- ಹುಣಸೂರು ಹೆದ್ದಾರಿಯ ತಿತಿಮತಿ ಸೇತುವೆ ಬಳಿ ತಾತ್ಕಾಲಿಕ ಮಾರ್ಗದಲ್ಲಿ ಇಂದು ಮರು ಕುಸಿತದೊಂದಿಗೆ ಹೊಂಡ ಬಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಚಾರವನ್ನು ಆ ಮೂಲಕ ಸ್ಥಗಿತಗೊಳಿಸಲಾಯಿತು. ಹೀಗಾಗಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆ ಮುಖಾಂತರವೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಂಬಂಧಿಸಿದ ಗುತ್ತಿಗೆದಾರರು ಈ ಬಗ್ಗೆ ಪ್ರತಿಕ್ರಿಯಿಸಿ, ಇನ್ನು ಮೂರು ದಿನಗಳಲ್ಲಿ ನೂತನ ಸೇತುವೆ ಪೂರ್ಣಗೊಳ್ಳಲಿದ್ದು, ಸಧ್ಯ ವಾಹನಗಳ ಸಂಚಾರಕ್ಕೆ ತೊಂದರೆಯಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳಾದೇವಿ ನಗರ

ಮಳೆಯ ಆರ್ಭಟಕ್ಕೆ ಮಡಿಕೇರಿ ಮಂಗಳಾದೇವಿನಗರದ ಕೃಷ್ಣಪ್ಪ ಎಂಬವರ ಮನೆಯ ಹಿಂಭಾಗ ಭೂಕುಸಿತ ಉಂಟಾಗಿ ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಆದಿಪರಾಶಕ್ತಿ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಮರವೊಂದು ನೆಲಕ್ಕುರುಳಿ ಸುಮಾರು ಎಂಟು ತಾಸುಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯ ಎಪಿಎಸ್‍ವೈಸಿ ಸಂಘದ ಯುವಕರು, ಸ್ಥಳೀಯರು, ನಗರಸಭೆಯವರು ಮರವನ್ನು ತೆರವುಗೊಳಿಸಿದರು. ನಂತರ ಅದೇ ಮಾರ್ಗದಲ್ಲಿ ವಿದ್ಯುತ್ ಕಂಬವೊಂದು ಮುರಿದು ಬಿತ್ತು. ಸ್ಥಳಕ್ಕೆ ಬಂದ ವಿದ್ಯುತ್ ಇಲಾಖಾ ಸಿಬ್ಬಂದಿ ಅದನ್ನು ತೆರವು ಮಾಡಿದರು. ನಗರಸಭಾ ಸದಸ್ಯ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಭಾಗಮಂಡಲ ಜಲಾವೃತ: ಭಾಗಮಂಡಲ ಸಂಗಮ ಕ್ಷೇತ್ರ ಸಂಫೂರ್ಣ ಜಲಾವೃತಗೊಂಡು ಅಯ್ಯಂಗೇರಿ ಮಾರ್ಗದ ಸೇತುವೆ ಮುಳುಗಡೆಯೊಂದಿಗೆ ರಸ್ತೆ ಮೇಲೆ 2 ಅಡಿಗಳಷ್ಟು ನೀರಿದ್ದು, ಸಾರ್ವಜನಿಕ ಸಂಚಾರಕ್ಕೆ ಪರದಾಡುವಂತಾಯಿತು. ಇನ್ನು ದೋಣಿ ಸೌಲಭ್ಯ ಕಲ್ಪಿಸಿಲ್ಲ; ಬದಲಾಗಿ ಗೃಹರಕ್ಷಕ, ಪೊಲೀಸರು ಜನರನ್ನು ಕೈ ಹಿಡಿದು ದಾಟಿಸುತ್ತಿದ್ದ ದೃಶ್ಯ ಎದುರಾಯಿತು. ಸ್ಥಳಕ್ಕೆ ತಹಶೀಲ್ದಾರ್ ಕುಸುಮ ಹಾಗೂ ಕಂದಾಯ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ಕರಿಕೆಯಲ್ಲಿ ತೊಡಕು: ವಿಪರೀತ ಮಳೆಯಿಂದಾಗಿ ಕರಿಕೆ ಮೂಲಕ ಹಾದು ಹೋಗುವ ಕೇರಳ ಹೆದ್ದಾರಿಯ ಹಳೆ ಮನೆ ಎಂಬಲ್ಲಿ ಮೋರಿಯೊಂದು ಕಸ ತುಂಬಿಕೊಂಡು ರಸ್ತೆಯಲ್ಲಿ ನೀರು ಹರಿಯುವ ಮೂಲಕ ಅಪಾಯದ ಮುನ್ಸೂಚನೆ ಕಂಡುಬಂದಿದೆ. ಇತ್ತ ಸಂಬಂಧಪಟ್ಟವರು ತುರ್ತು ಗಮನ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗಡಿಯಲ್ಲಿ ಉತ್ತಮ ಮಳೆ: ಶನಿವಾರಸಂತೆ, ಶಿರಂಗಾಲ, ಹೆಬ್ಬಾಲೆ, ತೊರೆನೂರು, ಕೂಡಿಗೆ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಈ ಭಾಗದ ಬಯಲು ಸೀಮೆ ರೈತರು ತಮ್ಮ ಕೃಷಿ ಕಾಯಕ ಚುರುಕುಗೊಳಿಸಿದ್ದಾರೆ.

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಪ್ರವಾಹ ಭೀತಿ

ನಾಪೆÇೀಕ್ಲು ವ್ಯಾಪ್ತಿಯಲ್ಲಿ ತಾ. 6ರ ಸಂಜೆಯಿಂದ ಆರಂಭಗೊಂಡ ಮಳೆಯು ಎಡೆಬಿಡದೆ ಸುರಿಯುತ್ತಿದೆ. ಇದರಿಂದ ನದಿ, ಹೊಳೆ, ಹಳ್ಳಕೊಳ್ಳ, ತೋಡುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಅಪಾಯದ ಭೀತಿ ಮೂಡಿದೆ.

ಕಾವೇರಿ ನದಿ ಹರಿಯುತ್ತಿರುವ ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಅಪಾಯದತ್ತ ಏರಿಕೆಯಾಗುತ್ತಿದೆ. ಇನ್ನುಳಿದಂತೆ ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡುಬಂದಿದೆ. ನಾಲಡಿ ಗ್ರಾಮದ ಅಂಬಲಪೆÇಳೆಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಎರಡೂ ಸೇತುವೆಗಳು ಜಲಾವೃತಗೊಂಡಿದೆ. ಮಳೆಯು ಇದೇ ರೀತಿ ಮುಂದುವರಿದಲ್ಲಿ ಕಕ್ಕಬ್ಬೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ತೆರಳುವ ರಸ್ತೆಯಲ್ಲಿ ಪ್ರವಾಹ ಉಂಟಾಗಲಿದೆ. ಹಾಗೆಯೇ ನಾಪೆÇೀಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿಯೂ ಕಾವೇರಿ ನದಿ ಪ್ರವಾಹ ಭೀತಿ ಉಂಟಾಗಿದೆ.

ವೀರಾಜಪೇಟೆ ವ್ಯಾಪ್ತಿ: ಕಳೆದ 9 ದಿನಗಳಿಂದ ವಿರಾಮ ನೀಡಿದ್ದ ಭಾರೀ ಮಳೆ ನಿನ್ನೆ ಅಪರಾಹ್ನದ ನಂತರ ಮುಂದುವರೆದಿದೆ. ಈ ವಿಭಾಗದಲ್ಲಿ ಮಳೆ ಇಲ್ಲದೆ ಇಳಿಮುಖಗೊಂಡಿದ್ದ

ಕೆರೆ, ತೋಡುಗಳು, ಕಾವೇರಿ ಹೊಳೆಯ ನೀರಿನ ಮಟ್ಟ ರಾತ್ರಿಯಿಂದ ಏರಿಕೆಯನ್ನು ಕಂಡಿದೆ. ಕದನೂರು, ಬಿಟ್ಟಂಗಾಲ ಹಾಗೂ ಆರ್ಜಿ ಗ್ರಾಮಗಳಲ್ಲಿ ಗದ್ದೆ ಹಾಗೂ ಬಾಣೆ ಜಾಗಗಳು ಜಲಾವೃತ್ತಗೊಳ್ಳುವಂತಾಗಿದೆ. ಬೇತ್ರಿ ಸೇತುವೆಯ ಕಾವೇರಿ ಹೊಳೆಯಲ್ಲಿ ಇಂದು ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಎರಡೂವರೆ ಅಡಿಗಳಷ್ಟು ನೀರಿನ ಪ್ರಮಾಣ ಏರಿಕೆಯಾಗಿದೆ.

ವೀರಾಜಪೇಟೆ ವಿಭಾಗದಲ್ಲಿ ಬೆಳಗಿನಿಂದಲೇ ಭಾರೀ ಮಳೆಯಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಲ್ಲಿನ ಮಾಂಸ ಮಾರುಕಟ್ಟೆಯ ಸೇತುವೆ ಬಳಿ ರಸ್ತೆಯ ಮೇಲೆ ನೀರು ಹರಿಯುವದು ಕಂಡು ಬಂದರೂ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ. ಇಲ್ಲಿನ ರಾಜಾ ಕಾಲುವೆ ಸೇತುವೆ ಮಾತ್ರ ನೀರಿನಿಂದ ತುಂಬಿ ಹರಿಯುತ್ತಿತ್ತು.

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದಿನ ಬೆಳಗಿನ 8 ಗಂಟೆಯವರೆಗೆ ಒಟ್ಟು 3.6 ಇಂಚು ಮಳೆ ಸುರಿದಿದೆ.

ಆರ್ಜಿ ಗ್ರಾಮದಲ್ಲಿಯೂ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು ಗ್ರಾಮದ ಅನ್ವಾರುಲ್‍ಹುದಾ ವಿದ್ಯಾ ಸಂಸ್ಥೆಯ ಮುಂಭಾಗ ಕೊಡಗು - ಕೇರಳ ರಾಜ್ಯ ಹೆದ್ದಾರಿಯ ಸೇತುವೆಯ ಮೇಲೆ ಒಂದಡಿಯಷ್ಟು ನೀರು ಹರಿಯುತ್ತಿದೆ. ವಾಹನ ಸಂಚಾರಕ್ಕೆ ಯಾವದೇ ರೀತಿ ಅಡಚಣೆಯಾಗಿಲ್ಲ.

ಕೂಡಿಗೆ: ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಮ್ಮನ ಮಂಟಿ ಮತ್ತು ಚೌಡೇಶ್ವರಿ ಬಡಾವಣೆಯಲ್ಲಿ ಸಾವಿತ್ರಮ್ಮ ವಸಂತ ಎಂಬವರ ಮನೆಯ ಹಿಂಬದಿ ಭೂ ಕುಸಿತ ಉಂಟಾಗಿ ತಳಭಾಗದಲ್ಲಿ ಇದ್ದ ಮನೆಗಳಿಗೆ ಹಾನಿಯುಂಟಾಗಿದೆ. ಮೂರು ಮನೆಗಳು ಹಾಗೂ ಹಿಂಬದಿಯ ಗೋಡೆಗಳು ಕುಸಿದು ಬಿದ್ದಿದ್ದು, ರಾತ್ರಿ ಸಂದರ್ಭ ಇಲ್ಲಿನ ನಿವಾಸಿಗಳು ಮನೆಯ ಮುಂಭಾಗದ ಕೋಣೆಗಳಲ್ಲಿ ಮಲಗಿದ್ದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಂದು ಬೆಳಿಗ್ಗೆ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳ ಭೇಟಿ ನೀಡಿದ್ದು, ಗ್ರಾಮ ಪಂಚಾಯಿತಿಯ ವತಿಯಿಂದ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇದೇ ಸಂದರ್ಭ ತಿಳಿಸಿದರು . ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ್ ಮುಳ್ಳುಸೋಗೆ ಪಂಚಾಯ್ತಿ ಪಿಡಿಓ ರಾಜಶೇಖರ್, ಬಿಲ್ ಕಲೆಕ್ಟರ್ ಕುಮಾರಸ್ವಾಮಿ ಕಂದಾಯ ಪರಿವಿಕ್ಷಕ ಗೌತಮ್, ಸಹಾಯಕ ವೆಂಕಟೇಶ್. ಸೇರಿದಂತೆ ಇನ್ನಿತರರು ಹಾಜರಿದ್ದರು.

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶನಿವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನದಿಂದ ಸಂಜೆಯವರೆಗೂ ಸಾಧಾರಣ ಮಳೆಯಾಗಿದೆ. ವಾರದ ಸಂತೆಯ ದಿನ ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.

ಮೂರ್ನಾಡು : ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ಹೊಳೆ ತುಂಬಿ ಹರಿಯುತ್ತಿದ್ದು ಕಿರು ಸೇತುವೆ ಮುಳುಗಡೆಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಸಿದ್ದಾಪುರ : ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿದ್ದಾಪುರದ ಕರಡಿಗೋಡು, ಗುಹ್ಯ ಹಾಗೂ ನ್ಯೆಲ್ಯಹುದಿಕೇರಿ ವ್ಯಾಪ್ತಿಯ ಬರಡಿ, ಕುಂಬಾರಗುಂಡಿ, ಬೆಟ್ಟದಕಾಡು ಸೇರಿದಂತೆ ವಿವಿಧ ಪ್ರದೇಶದಲ್ಲಿ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ. ಕರಡಿಗೋಡುವಿನ ಚಿಕ್ಕನಹಳ್ಳಿಗೆ ತೆರಳುವ ಕಿರು ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ.

ಗುಹ್ಯ ಗ್ರಾಮದಲ್ಲೂ ನದಿ ನೀರಿನ ಮಟ್ಟ ಹೆಚ್ಚಾದ ಕಾರಣ ರಸ್ತೆ ಸಂಪರ್ಕಗೊಳ್ಳುವ ಸಾದ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಂದಾಯ ಇಲಾಖಾಧಿಕಾರಿಗಳು ನದಿ ತಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶ್ರೀಮಂಗಲ: ದ. ಕೊಡಗಿನಾದ್ಯಂತ ಕಳೆದ 24 ಗಂಟೆಯಿಂದ ಮಳೆ ಬಿರುಸುಗೊಂಡಿದೆ. ದ.ಕೊಡಗಿನ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ವ್ಯಾಪ್ತಿಯ ಬಿರುನಾಣಿಯಲ್ಲಿ ಕಳೆದ 24 ಗಂಟೆಯಲ್ಲಿ 8 ಇಂಚಿಗೂ ಅಧಿಕ ಮಳೆಯಾಗಿದೆ.

ಶ್ರೀಮಂಗಲ, ಟಿ.ಶೆಟ್ಟಿಗೇರಿ, ಹುದಿಕೇರಿ, ಬಿ.ಶೆಟ್ಟಿಗೇರಿ, ಕುಟ್ಟ ವ್ಯಾಪ್ತಿಯಲ್ಲಿ ಮಳೆ ತೀವ್ರಗೊಂಡಿದ್ದು, ರಾಮತೀರ್ಥ, ಲಕ್ಷ್ಮಣ ತೀರ್ಥ, ಕಕ್ಕಟ್ಟ್‍ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ರಸ್ತೆ ಬದಿ, ಗ್ರಾಮೀಣ ಭಾಗದ ಮನೆಯ ಸಮೀಪ ಭೂ ಕುಸಿತ ಉಂಟಾಗಿದೆ.

ಬಿರುನಾಣಿ-ಹುದಿಕೇರಿ ನೂತನ ಸಂಪರ್ಕ ರಸ್ತೆಯ ಸೇತುವೆ ಸಮೀಪ ಭೂ ಕುಸಿತ ಉಂಟಾಗಿದೆ.

ಲಕ್ಷ್ಮಣತೀರ್ಥ ನದಿ ಹುಟ್ಟುವ ಶ್ರೀಮಂಗಲ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಈ ನದಿ ಹರಿಯುವ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಲಕ್ಷ್ಮಣ ನದಿ ತುಂಬಿ ಹರಿಯುತ್ತಿದ್ದು, ಇದೇ ರೀತಿಯಲ್ಲಿ ಮಳೆ ಮುಂದುವರೆದರೆ ಬಲ್ಯಮುಂಡೂರು-ಹರಿಹರ ರಸ್ತೆ, ಹಾಗೂ ಬಾಳೆಲೆ-ನಿಟ್ಟೂರು, ಬಾಳೆಲೆ-ಮಲ್ಲೂರು ನಡುವಿನ ಸೇತುವೆ ಮೇಲೆ ಪ್ರವಾಹ ಉಂಟಾಗಿ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.

ಈಗಾಗಲೇ ಮಳೆ ತೀವ್ರಗೊಂಡಿರುವದರಿಂದ ತಗ್ಗು ಪ್ರದೇಶದ ಭತ್ತದ ಗದ್ದೆ, ಕಾಫಿ ತೋಟ ಇತ್ಯಾದಿಗಳು ಜಲಾವೃತವಾಗಿದೆ. ಕಾಫಿ, ಕರಿಮೆಣಸು ಹಾಗೂ ಅಡಿಕೆ ಫಸಲುಗಳ ತೀವ್ರ ನಷ್ಟ ಉಂಟಾಗಲಿದ್ದು, ಈಗಾಗಲೇ ಈ ಫಸಲುಗಳು ಕೊಳೆರೋಗಕ್ಕೆ ತುತ್ತಾಗಿ ನಷ್ಟವಾಗಿರುವ ಬಗ್ಗೆ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಚಾರಕ್ಕೆ ತೊಡಕು

ಗೋಣಿಕೊಪ್ಪ ವರದಿ: ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟದಿಂದಾಗಿ ತಿತಿಮತಿಯ ತಾತ್ಕಾಲಿಕ ಸೇತುವೆ ಕುಸಿದು ಕೆಲ ಹೊತ್ತು ಸಂಚಾರಕ್ಕೆ ತೊಡಕುಂಟಾಗಿತ್ತು. ನೂತನ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವದರಿಂದ ಆ ಮಾರ್ಗವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ತಾತ್ಕಾಲಿಕ ಸೇತುವೆಯ ಮಧ್ಯಭಾಗದಲ್ಲಿ ಮತ್ತೆ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ನೀರಿನ ಪ್ರಮಾಣ ಹೆಚ್ಚಾದ ಕಾರಣ ತಾತ್ಕಾಲಿಕ ಸೇತುವೆ ಮೂಲಕ ವಾಹನ ಸಂಚರಿಸದಂತೆ ಕ್ರಮಕೈಗೊಳ್ಳಲಾಯಿತು. ನಂತರ ನೂತನ ಸೇತುವೆ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸೇತುವೆಯು ರಸ್ತೆ ಮಣ್ಣಿನಿಂದ ಕೂಡಿರುವದರಿಂದ ವಾಹನ ಸಂಚಾರಕ್ಕೆ ಕೆಸರಿನಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಏಕಮುಖವಾಗಿ ಸಂಚರಿಸಬೇಕಾಗಿದ್ದರಿಂದ ವಾಹನಗಳು ನಿಂತು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕು ಪಡೆದುಕೊಂಡಿದ್ದು, ನದಿ, ತೋಡುಗಳಲ್ಲಿ ನೀರಿನ ಪ್ರಮಾಣ ಮತ್ತೆ ಹೆಚ್ಚಾಗಿದೆ.

ನದಿತೊರೆಗಳಲ್ಲಿ ನೀರಿನ ಏರಿಕೆ

ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆ ರಭಸಗೊಂಡಿದೆ. ಮೊನ್ನೆವರೆಗೂ ಬಿಡುವು ನೀಡಿದ್ದ ಮಳೆ, ನಿನ್ನೆ ಬೆಳಗ್ಗಿನಿಂದಲೂ ಆರ್ಭಟಿಸುತ್ತಿದ್ದು, ನದಿ ತೊರೆಗಳಲ್ಲಿ ನೀರಿನ ಹರಿವು ಅಧಿಕಗೊಂಡಿದೆ.

ತಾಲೂಕು ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆಯಾಗುತ್ತಿದ್ದು, ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗ ಗ್ರಾಮದಲ್ಲಿ ವರ್ಷಾರಂಭದಿಂದ ಇಲ್ಲಿಯವರೆಗೆ 75 ಇಂಚಿಗೂ ಅಧಿಕ ಮಳೆ ಸುರಿದಿದೆ. ಹೆಗ್ಗಡಮನೆ, ಮಲ್ಲಳ್ಳಿ ಭಾಗಕ್ಕೆ 90 ಇಂಚಿಗೂ ಅಧಿಕ ಮಳೆಯಾಗಿದೆ.

ಶಾಂತಳ್ಳಿ ಹೋಬಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ರೀತಿ ಮುಂದುವರೆದರೆ ಕಾಫಿ ಫಸಲು ನೆಲಕ್ಕಚ್ಚುವ ಭೀತಿ ಎದುರಾಗಿದೆ.

ಹರಗ ವ್ಯಾಪ್ತಿಯಲ್ಲಿ ಈಗಾಗಲೇ ಕಾಫಿ ಉದುರುತ್ತಿದ್ದು, ಕೊಳೆರೋಗ ಅಧಿಕವಾಗಿದೆ ಎಂದು ಕೃಷಿಕ ಶರಣ್ ತಿಳಿಸಿದ್ದಾರೆ. ತೋಳೂರುಶೆಟ್ಟಳ್ಳಿ ವ್ಯಾಪ್ತಿಗೆ ಕಳೆದ 24 ಗಂಟೆಯಲ್ಲಿ 2.80 ಇಂಚು ಮಳೆಯಾಗಿದ್ದು, ಇಲ್ಲಿಯವರೆಗೆ 50 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 26 ಇಂಚು ಮಳೆಯಾಗಿತ್ತು ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಭಾಗದಲ್ಲಿ ಗದ್ದೆ ಕೆಲಸಗಳು ಪ್ರಗತಿಯಲ್ಲಿದ್ದು, ಸಸಿಮಡಿಗೆ ಅಧಿಕ ನೀರು ನುಗ್ಗಿದರೆ ಅಥವಾ ಮರಳು ನುಗ್ಗಿದರೆ ಹಾನಿಗೀಡಾಗುವ ಸಂಭವವಿದೆ. ಕೆಲವೆಡೆ ನಾಟಿ ಕಾರ್ಯ ಪ್ರಗತಿಯಲ್ಲಿದ್ದು, ಹೊಳೆ ನೀರು ನುಗ್ಗಿದರೆ ನಷ್ಟವಾಗಲಿದೆ. ಕರಿಮೆಣಸು ಬಳ್ಳಿಗಳಲ್ಲಿ ಗೆರೆ ಮೂಡಿದ್ದು, ಇದೇ ರೀತಿ ಮಳೆಯಾದರೆ ಉದುರುವ ಭೀತಿ ಎದುರಾಗಿದೆ.

ಬೇಳೂರು, ಹಾನಗಲ್ಲು, ನೇರುಗಳಲೆ, ಗಣಗೂರು, ಆಲೂರುಸಿದ್ದಾಪುರ, ಗೌಡಳ್ಳಿ, ದೊಡ್ಡಮಳ್ತೆ, ಕಿರಗಂದೂರು, ಮಾದಾಪುರ, ಹರದೂರು, ಯಡವನಾಡು,ನಂದಿಗುಂದ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲೂ ಮಳೆ ಸುರಿಯುತ್ತಿದೆ. ಗಾಳಿಯ ರಭಸ ಕಡಿಮೆ ಇರುವದರಿಂದ ನಷ್ಟದ ಪ್ರಕರಣಗಳು ವರದಿಯಾಗಿಲ್ಲ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಕುಡಿಗಾಣ ಗ್ರಾಮದ ಹೊಳೆಯಲ್ಲಿ ನೀರಿನ ಹರಿವು ಅಧಿಕಗೊಳ್ಳುತ್ತಿದ್ದು, ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರ ದಿನೇಶ್ ತಿಳಿಸಿದ್ದಾರೆ.

ಹರಪಳ್ಳಿ ರವೀಂದ್ರ ಹೂಳು ತೆಗೆಸಿದ ಯಡೂರು ದೇವರ ಕೆರೆ, ಪಟ್ಟಣದ ಆನೆಕೆರೆಗಳಲ್ಲಿ ನೀರಿನ ಸಂಗ್ರಹ ಅಧಿಕವಾಗುತ್ತಿದ್ದು, ಗತವೈಭವವನ್ನು ಮರಳಿ ಪಡೆಯುವ ಆಶಾಭಾವನೆಯನ್ನು ರವೀಂದ್ರ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಗುಂಡಿಬಿದ್ದ ರಸ್ತೆಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಡಕಾಗಿವೆ. ಹಾನಗಲ್ಲು ಕೆರೆಯಿಂದ ಹಾನಗಲ್ಲು ಶೆಟ್ಟಳ್ಳಿಗೆ ತೆರಳುವ ರಸ್ತೆ, ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿ ರಸ್ತೆ ಸೇರಿದಂತೆ ಗ್ರಾಮೀಣ ಭಾಗದ ಅನೇಕ ರಸ್ತೆಗಳು ಹಾನಿಗೀಡಾಗಿವೆ.

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿಯಲ್ಲಿ ಪನರ್ವಸು ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

ತಾ. 6ರ ಸಂಜೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರಿಗೆ ರಜೆ ನೀಡಲಾಗಿದೆ.ಹಟ್ಟಿಹೊಳೆಗೆ ಒಂದೇ ದಿನದಲ್ಲಿ 8 ಇಂಚು, ಮಾದಾಪುರಕ್ಕೆ 5 ಇಂಚು, ಐಗೂರಿಗೆ 7 ಇಂಚು, ಹರದೂರಿಗೆ 6 ಇಂಚು, ಸುಂಟಿಕೊಪ್ಪಕ್ಕೆ 5 ಇಂಚು, ಮಳೆಯಾಗಿದೆ. ಹಟ್ಟಿಹೊಳೆ, ಮಾದಾಪುರ, ಐಗೂರು, ಚೋರನಹೊಳೆ, ಹರದೂರು ಹೊಳೆ ತುಂಬಿ ಹರಿಯುತ್ತಿದ್ದು ನಾಲೆ, ತೊರೆಗಳು ತುಂಬಿ ಹರಿಯುತ್ತಿವೆ.

- ವರದಿ :ಹರೀಶ್ ಮಾದಪ್ಪ, ನಾಗರಾಜಶೆಟ್ಟಿ, ಸುಧೀರ್, ವಿಜಯ್ ಹಾನಗಲ್, ರಾಜ್‍ಕುಮಾರ್, ರಾಜು ರೈ, ಚಂದ್ರಮೋಹನ್, ಹರೀಶ್ ಟಿ.ಸಿ., ವಾಸು, ಸುನಿಲ್, ನರೇಶ್.